Fact Check | ಮೀರತ್‌ನಲ್ಲಿ ಮುಸ್ಲಿಮರು ಸಾಧುಗಳ ವೇಷ ಧರಿಸಿ ಸಿಕ್ಕಿಬಿದ್ದಿದ್ದಾರೆ ಎಂಬುದು ಸುಳ್ಳು

” ಈ ವಿಡಿಯೋ ನೋಡಿ ಇಲ್ಲಿ ಸಿಕ್ಕಿ ಬಿದ್ದಿರುವವರು ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಇವರು ಸಾಧುಗಳ ವೇಷವನ್ನು ಧರಿಸಿ ಸಿಕ್ಕಿ ಬಿದ್ದಿದ್ದಾರೆ. ಕೇವಲ ಇಷ್ಟು ಮಾತ್ರವಾಗಿದ್ದರೆ ಈ ವಿಚಾರ ಬೆಳಕಿಗೆ ಬರುತ್ತಿರಲಿಲ್ಲ. ಇವರು ಸಾಧುಗಳ ವೇಷ ಧರಿಸಿ ಹಿಂದೂಗಳ ಮಕ್ಕಳನ್ನು ಅಪಹರಿಸುತ್ತಿದ್ದರು, ಈ ವೇಳೆ ಇವರು ಜನರ ಕೈಗೆ ಸಿಕ್ಕಿಬಿದ್ದಿದ್ದಾರೆ. ಈಗ ಇವರನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮವನ್ನು ಕೈಗೊಂಡಿದ್ದಾರೆ” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇದೇ ವಿಡಿಯೋವನ್ನು ಬಳಸಿಕೊಂಡಿರುವ ಸುದರ್ಶನ ಸುದ್ದಿ ಸಂಸ್ಥೆ ಕೂಡ ಈ ಕುರಿತು ವರದಿಯನ್ನು ಪ್ರಕಟಿಸಿದ್ದು, ಅದು ತನ್ನ ಎಕ್ಸ್‌ ಖಾತೆಯಲ್ಲಿ “ಮೀರತ್‌ನಲ್ಲಿ ಸಾಧುಗಳ ವೇಷ ಧರಿಸಿ ತಿರುಗಾಡುತ್ತಿದ್ದ ಮೂವರನ್ನು ಸಾರ್ವಜನಿಕರು ವಿಚಾರಣೆಗೆ ಒಳಪಡಿಸಿದಾಗ ಅದರಲ್ಲಿ ಒಬ್ಬನ ಆಧಾರ್ ಕಾರ್ಡ್ ಪತ್ತೆಯಾಗಿದೆ. ಆತ ಎಂ.ಡಿ ಶಮಿಮ್ ಎಂದು ತಿಳಿದುಬಂದಿದೆ. ಈ ಗ್ಯಾಂಗ್ ಕೇಸರಿ ಬಟ್ಟೆಗಳನ್ನು ಧರಿಸಿ ಹಿಂದೂ ಪ್ರದೇಶಗಳನ್ನು ವೀಕ್ಷಣೆ ಮಾಡಿ, ಬಳಿಕ ಈ  ಮೂವರು ಮಕ್ಕಳನ್ನು ಅಪಹರಿಸುಲು ಮುಂದಾಗುತ್ತಿದ್ದರು” ಎಂದು ತನ್ನ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದೆ. ಆದರೆ ಈ ಕುರಿತು ಬೇರೆ ಯಾವ ಮಾಧ್ಯಮಗಳು ಈ ರೀತಿ ವರದಿ ಮಾಡದೆ ಇರುವುದು ಹಲವು ಅನುಮಾನಗಳನ್ನು ಮೂಡಿಸಿದ್ದು ಈ ಫ್ಯಾಕ್ಟ್‌ಚೆಕ್‌ನಲ್ಲಿ ಈ ಸುದ್ದಿಯ ಅಸಲಿಯತ್ತು ಏನು ಎಂಬುದನ್ನು ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಈ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋಗೆ ಸಂಬಂಧ ಪಟ್ಟಂತೆ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ, ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ಜುಲೈ 14 ರಂದು ಆಜ್ ತಕ್ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ.

ಆ ವರದಿಯ ಪ್ರಕಾರ ಮೀರತ್‌ನ ಪ್ರಹ್ಲಾದ್ ನಗರದಲ್ಲಿ ಘಟನೆ ನಡೆದಿದ್ದು, ಮಕ್ಕಳ ಅಪಹರಣಕಾರರೆಂದು ಶಂಕಿಸಿ ಮೂವರು ಸಾಧುಗಳನ್ನು ಥಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಹೊಡೆದಾಟದ ವಿಡಿಯೋ ವೈರಲ್ ಆದ ನಂತರ, ಪೊಲೀಸರು ವಿಷಯ ಅರಿತು ಪುನೀತ್, ಮಿಕ್ಕಿ ಮತ್ತು ಸುಧಾಂಶು ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ  ಎಂದು ತಿಳಿದು ಬಂದಿದೆ. ಅಲ್ಲಿಗೆ ಆರೋಪಿಗಳು ಮುಸ್ಲಿಮರಲ್ಲ ಎಂಬುದು ಸಾಭೀತಾಗುತ್ತದೆ.

ಇನ್ನು ಈ ಘಟನೆಯಲ್ಲಿ ಸಾಧುಗಳ ಗುರುತಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಟಿವಿ 9 ಭಾರತವರ್ಷ್ ಮತ್ತು ನ್ಯೂಸ್ 18 ವರದಿಗಳು ತಿಳಿಸಿವೆ. ಅವರು ಮುಸ್ಲಿಂ ಮಕ್ಕಳ ಅಪಹರಣಕಾರರು ಎಂದು ಭಾವಿಸಿ ಮೂವರನ್ನು ಒತ್ತೆಯಾಳಾಗಿ ಇಟ್ಟುಕೊಂಡು ಥಳಿಸಿದ್ದಾರೆ ಎಂಬುದು ಕೂಡ ತಿಳಿದು ಬಂದಿದೆ. ಸಾಧುಗಳು ಮುಸ್ಲಿಮರಲ್ಲ ಆದರೆ ನಾಥ್ ಸಮುದಾಯದವರು ಎಂದು ದೃಢಪಡಿಸಿದ ಮೀರತ್ ಪೊಲೀಸರ ಉಲ್ಲೇಖಗಳು ಮತ್ತು ವಿಡಿಯೋಗಳು ಕೂಡ ಕಂಡು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಮಿರಾತ್‌ನಲ್ಲಿ ಬಂಧನಕ್ಕೆ ಒಳಪಟ್ಟ ಸಾಧುಗಳು ಮುಸ್ಲಿಮರು ಎಂಬುದು ಸುಳ್ಳು. ಬಂಧಿತರೆಲ್ಲರೂ ಹಿಂದೂಗಳು ಮತ್ತು ನಾಥ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರನ್ನು ಮಕ್ಕಳ ಅಪಹರಣಕಾರರು ಎಂದು ಭಾವಿಸಿ ಸ್ಥಳೀಯರು ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ತನಿಖೆ ಕೂಡ ಆರಂಭವಾಗಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check | ಟ್ರಂಪ್‌ ಹತ್ಯೆಯನ್ನು ದಿ ಸಿಂಪ್ಸನ್ಸ್‌ ಕಾರ್ಟೂನ್‌ ಮೊದಲೇ ಊಹಿಸಿತ್ತು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *