Fact Check: ಜವಹರಲಾಲ್ ನೆಹರು ಮೂಲತಃ ಮುಸ್ಲಿಂ ಕುಟುಂಬದವರು ಎಂದು ಸುಳ್ಳು ಹಂಚಿಕೊಳ್ಳುತ್ತಿರುವ ಬಿಜೆಪಿ ಬೆಂಬಲಿಗರು

ಜವಹರಲಾಲ್ ನೆಹರು

ಭಾರತದಲ್ಲಿ ಕಳೆದೊಂದು ದಶಕಗಳಿಂದ ಸ್ವಾತಂತ್ರ ಹೋರಾಟಗಾರ ಮತ್ತು ಭಾರತದ ಮೊದಲ ಪ್ರಧಾನಿಯಾದ ಜವಹರಲಾಲ್‌ ನೆಹರು ಅವರ ಕುರಿತಂತೆ ಸಾಕಷ್ಟು ಸುಳ್ಳು ಮಾಹಿತಿಗಳನ್ನು ಮತ್ತು ಅವರ ಕುರಿತು ದ್ವೇಷವನ್ನು ಬಿತ್ತಲಾಗುತ್ತಿದೆ. ಇಂದಿನ ಹಾಲಿ ಪ್ರಧಾನಿಯಾದ ನರೇಂದ್ರ ಮೋದಿಯವರು ಸಹ ತಮ್ಮ  ಅನೇಕ ಭಾಷಣಗಳಲ್ಲಿ ನೆಹರೂ ಅವರನ್ನು ಎಳೆದು ತಂದು ಇಂದಿನ ಭಾರತದ ಎಲ್ಲಾ ಸಮಸ್ಯೆಗೆ ನೆಹರು ಅವರೇ ಕಾರಣ ಎಂದು ಬಿಂಬಿಸಲು ನೋಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.

ಈಗ, “ಪ್ರತಿಯೊಬ್ಬರಿಗೂ ಸತ್ಯ ತಿಳಿದಿರಲಿ. ಪ್ರ 1: ತುಸು ರೆಹಮಾನ್ ಬಾಯಿ ಎಂಬ ಮಹಿಳೆ ಯಾರು? ಉತ್ತರ: ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ತಾಯಿ. ಪ್ರ 2: ಜವಾಹರಲಾಲ್ ನೆಹರು ಅವರ ತಂದೆ ಯಾರು? ಉತ್ತರ: ಶ್ರೀ ಮುಬಾರಕ್ ಅಲಿ ಪ್ರ 3: ಮೋತಿಲಾಲ್ ನೆಹರು ಮತ್ತು ಜವಾಹರಲಾಲ್ ನೆಹರು ನಡುವಿನ ಸಂಬಂಧವೇನು? ಉತ್ತರ: ಮುಬಾರಕ್ ಅಲಿಯ ಮರಣದ ನಂತರ ಮೋತಿಲಾಲ್ ನೆಹರು ತುಸು ರೆಹಮಾನ್ ಬಾಯಿ ಅವರ ಎರಡನೇ ಪತಿ. ಮೋತಿಲಾಲ್ ಮುಬಾರಕ್ ಅಲಿಯ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಳು ಮತ್ತು ಅವಳು ಅವನ ಎರಡನೇ ಹೆಂಡತಿ. ಹಾಗಾಗಿ ಮೋತಿಲಾಲ್ ನೆಹರು ಜವಾಹರಲಾಲ್ ನೆಹರು ಅವರ ಮಲತಂದೆ. ಪ್ರ 4: ಜವಾಹರಲಾಲ್ ನೆಹರು ಹುಟ್ಟಿನಿಂದ ಕಾಶ್ಮೀರಿ ಪಂಡಿತರೇ? ಉತ್ತರ: ಇಲ್ಲ, ತಂದೆ ಮತ್ತು ತಾಯಿ ಇಬ್ಬರೂ ಮುಸ್ಲಿಮರು.”

ಇಂತಹ ಪ್ರಶ್ನಾವಳಿಯ ಸಂದೇಶವೊಂದು ಅನೇಕ ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಬಿಜೆಪಿ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ವಾಟ್ಸಾಪ್‌ನಲ್ಲಿ ಈ ಸಂದೇಶವನ್ನು ಅನೇಕ ವರ್ಷಗಳಿಂದ ಹರಿಬಿಟ್ಟಿದ್ದು, ಎಲ್ಲಾ ಗ್ರೂಪುಗಳಿಗೆ ಹಂಚಿಕೊಳ್ಳುವಂತೆ ಒತ್ತಾಯಿಸಲಾಗಿದೆ.

ಫ್ಯಾಕ್ಟ್‌ಚೆಕ್: ವೈರಲ್ ಸಂದೇಶದಲ್ಲಿ ಪ್ರತಿಪಾದಿಸಲಾಗಿರುವ ಎಲ್ಲಾ ಮಾಹಿತಿಗಳು ಸಹ ಸಂಪೂರ್ಣ ಸುಳ್ಳಾಗಿದ್ದು ಬಾಲೀಷವಾಗಿವೆ.

ಮೊದಲಿಗೆ ನೆಹರು ಅವರ ತಾಯಿಯ ಹೆಸರು ತುಸು ರೆಹಮಾನ್ ಬಾಯಿ ಎಂದು ಸುಳ್ಳು ಹರಡಲಾಗುತ್ತಿದೆ. ಮೋತಿಲಾಲ್‌ ನೆಹರು ಅವರ ಎರಡನೇ ಪತ್ನಿ ಸ್ವರೂಪ್‌ ರಾಣಿ (ಥುಸ್ಸು, ಎಂಬ ಕಾಶ್ಮೀರಿ ಪಂಡಿತರ ಒಂದು ಪಂಗಡಕ್ಕೆ ಸೇರಿದವರು) ಅವರ ಮೊದಲನೇ ಮಗ ಜವಾಹರಲಾಲ ನೆಹರೂ. ದಂಪತಿಗೆ ನೆಹರೂ ಅವರೂ ಸೇರಿ ವಿಜಯಲಕ್ಷ್ಮಿ ಪಂಡಿತ್‌ ಮತ್ತು ಕೃಷ್ಣಾ ನೆಹರೂ ಎಂಬ ಮೂವರು ಮಕ್ಕಳಿದ್ದಾರೆ. ಮಗುವಿಗೆ ಜನ್ಮ ನೀಡುವ ವೇಳೆಯಲ್ಲಿ ಮಗು ಹಾಗೂ ಮೋತಿಲಾಲ್‌ ಅವರ ಮೊದಲ ಪತ್ನಿ ಸಾವನ್ನಪ್ಪುತ್ತಾರೆ. ಆಗ ಸ್ವರೂಪ್‌ ರಾಣಿ ಅವರನ್ನು ಮೋತಿಲಾಲ್‌ ಅವರು ಮದುವೆ ಆಗುತ್ತಾರೆ. ಆದ್ದರಿಂದ ನೆಹರೂರವರ ತಾಯಿ ಕಾಶ್ಮೀರಿ ಪಂಡಿತರೇ ಹೊರತು ಮುಸ್ಲಿಂ ಅಲ್ಲ.

ವೈರಲ್ ಸಂದೇಶದಲ್ಲಿ ಜವಹರಲಾಲ್ ನೆಹರು ಅವರ ತಂದೆ ಮೋತಿಲಾಲ್ ನೆಹರು ಅವರ ಮೂಲ ಹೆಸರು ಮೋತಿಲಾಲ್ ಮುಬಾರಕ್ ಅಲಿ ಎಂದು ಮತ್ತು ಅವರ ತಂದೆ ತಾಯಿಗಳ ಹೆಸರು ಘಿಯಾಸುದ್ದೀನ್ ಘಾಜಿ ಮತ್ತು ಜಮುನಾ ನಹರ್ ಎಂದು ಹೇಳಲಾಗಿದೆ. ಆದರೆ ಮೋತಿಲಾಲ್ ನೆಹರು ಭಾರತೀಯ ವಕೀಲರು, ಸ್ವಾತಂತ್ರ್ಯ ಚಳುವಳಿಯ ಕಾರ್ಯಕರ್ತ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನೊಂದಿಗೆ ಸಂಬಂಧ ಹೊಂದಿದ್ದ ರಾಜಕಾರಣಿ. ಅವರು 1919 ರಿಂದ 1920 ರವರೆಗೆ ಮತ್ತು 1928 ರಿಂದ 1929 ರವರೆಗೆ ಎರಡು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದವರು. ಇವರು ತಂದೆ ಗಂಗಾಧರ್ ನೆಹರು ಮತ್ತು ತಾಯಿ ಇಂದ್ರಾಣಿಯವರು. 1857 ರ ಸಿಪಾಯಿ ದಂಗೆಯ ಸಮಯದಲ್ಲಿ, ಗಂಗಾಧರ ನೆಹರು ದೆಹಲಿಯ ಕೊತ್ವಾಲ್ ಅಥವಾ ಪೊಲೀಸ್ ಅಧಿಕಾರಿಯಾಗಿದ್ದರು.

ವೈರಲ್ ಸಂದೇಶದಲ್ಲಿ ಗಂಗಾಧರ್ ನೆಹರು ಅವರು ತಮ್ಮ ಘಿಯಾಸುದ್ದೀನ್ ಘಾಜಿ ಎಂಬ ಮೂಲ ಹೆಸರನ್ನು ಬದಲಿಸಿಕೊಂಡು ಅಲಹಾಬಾದ್‌ಗೆ ಹೋದರು ಎಂದು ಆರೋಪಿಸಿಲಾಗಿದೆ. ಮತ್ತು ಅಲಹಬಾದ್‌ಗೆ ಹೋದ ನಂತರ ಏನಾದರೂ ಎಂಬ ಕುರಿತು ಯಾವ ಮಾಹಿತಿಯನ್ನು ನೀಡುವುದಿಲ್ಲ. ಗಂಗಾಧರ್ ನೆಹರು ಅವರು ಹೆಸರು ಬದಲಾಯಿಸಿಕೊಂಡು ಎಂಬ ಈ ಆರೋಪಕ್ಕೆ ಯಾವುದೇ ದಾಖಲೆಗಳಿಲ್ಲ. ಮೋತಿಲಾಲ್ ನೆಹರು ಅವರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ತಂದೆ(ಗಂಗಾಧರ್ ನೆಹರು) ಅವರನ್ನು ಕಳೆದುಕೊಂಡ ಕುರಿತು ಮಾಹಿತಿ ಸಿಗುತ್ತದೆ.

ನೆಹರು ಅವರು ತಮ್ಮ ಆತ್ಮಕಥನದಲ್ಲಿ ತಮ್ಮ ಮನೆತನದ ಅಥವಾ ಕುಟುಂಬದ ಕುರಿತು ಹೀಗೆ ಬರೆದುಕೊಂಡಿದ್ದಾರೆ.

ಇನ್ನೂ ಇಂದಿರಾ ಗಾಂಧಿಯವರ ಗಂಡ ಫಿರೋಜ್ ಗಾಂಢಿ ಅವರು ಸಹ ಮುಸ್ಲಿಂ ಎಂದು ಪ್ರತಿಪಾದಿಸಲಾಗುತ್ತಿದೆ. ಆದರೆ ಫಿರೋಜ್ ಗಾಂಧಿ ಪಾರ್ಸಿ ಕುಟುಂಬದಲ್ಲಿ ಜನಿಸಿದರು. ಅವರ ಪೋಷಕರು, ಜಹಾಂಗೀರ್ ಫರೆಡೂನ್ ಘಾಂಡಿ ಮತ್ತು ರತಿಮಾಯಿ (ನೀ ಕಮಿಶರಿಯಟ್), ಬಾಂಬೆಯ ಖೇತ್ವಾಡಿ ಮೊಹಲ್ಲಾದಲ್ಲಿರುವ ನೌರೋಜಿ ನಾಟಕವಾಲಾ ಭವನದಲ್ಲಿ ವಾಸಿಸುತ್ತಿದ್ದರು. ಇಂದಿರಾ ಗಾಂಧಿ ಮತ್ತು ಫಿರೋಜ್ ಗಾಂಧಿ ಅವರ ಮದುವೆ ಸಂದರ್ಭದಲ್ಲಿ ಪಾರಸಿ ಧರ್ಮದ ಸಂಸ್ಕೃತಿಯನ್ನು ಅನುಸರಿಸದೆ ಹಿಂದು ಧರ್ಮದ ಅನುಸಾರ ಅವರ ಮದುವೆ ಜರುಗಿತು ಎಂದು ಎಲ್ಲಾ ದಾಖಲೆಗಳಲ್ಲಿಯೂ ನೀವು ನೋಡಬಹುದು. 

ಜವಹರಲಾಲ್ ನೆಹರು ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರನ್ನು ಮುಸ್ಲಿಂ ಎಂದು ಬಿಂಬಿಸುತ್ತಿರುವುದರ ಹಿಂದೆ ಧರ್ಮಾಧರಿತ ಧ್ವೇಷ ರಾಜಕಾರಣ ಅಡಗಿದೆ ಎಂದು ಇದರಿಂದ ಅರ್ಥ ಮಾಡಿಕೊಳ್ಳಬಹುದು. ವೈರಲ್ ಸಂದೇಶದಲ್ಲಿ ಜಿನ್ನಾ ತಂದೆ ಸಹ ಮೋತಿಲಾಲ್ ನೆಹರು ಎಂದು ಹೇಳಲಾಗಿದೆ. ಈ ಸಂದೇಶವು ಸುಳ್ಳು ಮಾಹಿತಿ ಅಲ್ಲದೇ ಕೆಟ್ಟ ರೀತಿಯಲ್ಲಿ ನೆಹರು ಅವರ ಕುಟುಂಬವನ್ನು ಅಪಹಾಸ್ಯ ಮಾಡಲಾಗಿದೆ. ಜವಹರಲಾಲ್ ನೆಹರು ಅವರ ಕುಟುಂಬದ ವಂಶವೃಕ್ಷವನ್ನು ನೀವು ಈ ಕೆಳಗೆ ನೋಡಬಹುದು.

ಇಷ್ಟೇ ಅಲ್ಲದೆ ಇತ್ತೀಚೆಗೆ ಆಡಳಿತಾರೂಢ ಬಿಜೆಪಿಗೆ ಸಿದ್ದಾಂತಕ್ಕೆ ಒಳಪಡದ ಎಲ್ಲರನ್ನೂ ಮುಸ್ಲಿಂ ಎಂದು ಬಿಂಬಿಸಲು ಬಲಪಂಥಿಯರು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ಮಹಾತ್ಮ ಗಾಂಧಿಯವರು ಸಹ ಮುಸ್ಲಿಂ, ಅವರ ತಾಯಿ ಮುಸ್ಲಿಂ ಪಂಗಡಕ್ಕೆ ಸೇರಿದವರು ಎಂದು ಸಹ ಅನೇಕ ಬಿಜೆಪಿ ಬೆಂಬಲಿಗರು ಸುಳ್ಳು ಹರಡುತ್ತಿದ್ದರು. ಅಷ್ಟೇ ಅಲ್ಲದೆ ಯೂಟೂಬರ್ ಧೃವ ರಾಠೀಯವರು ಆಡಳಿತರೂಢ ಬಿಜೆಪಿ ಸರ್ಕಾರವನ್ನು ಟೀಕಿಸಿದರು ಎಂಬ ಕಾರಣಕ್ಕೆ ಧೃವ ರಾಠೀ ಸಹ ಮುಸ್ಲಿಂ ಮತ್ತು ಅವರು ಪಾಕಿಸ್ತಾನ ಮೂಲದವರು ಎಂದು ಸುಳ್ಳನ್ನು ಹಂಚಿಕೊಳ್ಳಲಾಗಿತ್ತು.

ಆದ್ದರಿಂದ, ಮುಸ್ಲಿಂ ಆಗಿದ್ದರೆ ಯಾರೂ ತಾವು ಕೀಳು ಎಂದು ಭಾವಿಸಬೇಕಾಗಿಲ್ಲ. ನಮ್ಮ ಭಾರತದ ಸಂವಿಧಾನ ಭಾರತದ ಎಲ್ಲಾ ಪ್ರಜೆಗಳನ್ನು ಅವರ ಜಾತಿ, ಧರ್ಮ, ಭಾಷೆ, ಸ್ಥಳದ ಆಧಾರದಲ್ಲಿ ಅವರನ್ನು ಅವಮಾನಿಸುವುದನ್ನು, ತಾರತಮ್ಯ ಎಸಗುದನ್ನು ಕಾನೂನಾತ್ಮಕವಾಗಿ ತಡೆಯುತ್ತದೆ.

ಸಧ್ಯ ಜವಹರಲಾಲ್ ನೆಹರು ಅವರ ಕುಟುಂಬದ ಮೂಲದ ಕುರಿತು ಈ ರೀತಿಯ ಸುಳ್ಳನ್ನು ಮತ್ತು ದ್ವೇಷ ಪೂರಿತ ತಪ್ಪು ಸಂದೇಶವನ್ನು ಹಂಚಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಇಂತಹ ಸಂದೇಶಗಳಿಂದ ನಮ್ಮ ಸಮಾಜದ ಸ್ವಾಸ್ತ್ಯಕೂಡ ಹಾಳಾಗುವ ಸಾಧ್ಯತೆಯಿದೆ.


ಇದನ್ನು ಓದಿ: ಮಹಾತ್ಮಾ ಗಾಂಧೀಜಿಯವರು ಮುಸ್ಲಿಂ ಎಂಬುದು ಸಂಪೂರ್ಣ ಸುಳ್ಳು


ವೀಡಿಯೋ ನೋಡಿ: ‘ಬೇಟ್ ದ್ವಾರಕಾ’ ತಮಗೆ ಸೇರಿದ್ದು ಎಂದು ಗುಜರಾತ್ ವಕ್ಫ್ ಮಂಡಳಿ ಹೇಳಿಕೊಂಡಿಲ್ಲ |


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *