Fact Check | ವಿಶ್ವಕಪ್‌ ಗೆದ್ದ ನಂತರ ರೋಹಿತ್‌ ಶರ್ಮಾ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು 2023ರ ಫೋಟೋ ಹಂಚಿಕೆ

“ಈ ಫೋಟೋ ನೋಡಿ ಇದು ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರು ವಿಶ್ವಕಪ್‌ ಗೆದ್ದ ನಂತರ ಮೊದಲ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋ. ಈ ವೇಳೆ ರೋಹಿತ್‌ ಶರ್ಮಾ ಅವರ ಕುಟುಂಬವು ಕೂಡ ಅವರೊಂದಿಗೆ ಇತ್ತು. ದೇವರ ದರ್ಶನ ಪಡೆದು ದೇವಸ್ಥಾನದ ಮುಂದೆ ಅವರು ಕಂಡು ಬಂದಿದ್ದಾರೆ” ಎಂದು ಫೋಟೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇನ್ನು ಈ ಫೋಟೋ ನೋಡಿದ ಹಲವು ಮಂದಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಸಾಕಷ್ಟು ಜನ ರೋಹಿತ್‌ ಶರ್ಮಾ ಅವರ ಬಗ್ಗೆ ವ್ಯಾಪಕವಾದ ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದು, ಭಾರತದ ಕ್ರಿಕೆಟ್‌ ತಂಡದ ನಾಯಕನ ಮಾದರಿ ನಡೆ ಎಂದು ಶೇರ್‌ ಮಾಡುತ್ತಿದ್ದಾರೆ. ಆದರೆ ಹೀಗೆ ಹಂಚಿಕೊಳ್ಳುತ್ತಿರುವ ಸುದ್ದಿಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿರುವುದು ಹಲವು ಅನುಮಾನಗಳನ್ನು ಕೂಡ ಹುಟ್ಟು ಹಾಕಿದೆ. ಹಾಗಾಗಿ ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಫೋಟೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು ಇದಕ್ಕಾಗಿ ವೈರಲ್‌ ಫೋಟೋವನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ 13 ಆಗಸ್ಟ್‌ 2023 ರಂದು “Rohit Sharma At Tirumala ఇబ్బంది పెట్టిన అభిమానుల క్రేజ్.. | Teamindia | Telugu OneIndia” ಎಂಬ ಶೀರ್ಷಿಕೆಯ ಅಡಿಯಲ್ಲಿ  ಒನ್‌ ಇಂಡಿಯಾ ತೆಲುಗು ತನ್ನ ಯುಟ್ಯುಬ್‌ ಚಾನಲ್‌ನಲ್ಲಿ ಹಂಚಿಕೊಂಡ ವಿಡಿಯೋವೊಂದು ಪತ್ತೆಯಾಗಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವೈರಲ್‌ ಪೋಟೋ ಕುರಿತು ಹುಡುಕಲು ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ 13 ಆಗಸ್ಟ್‌ 2023ರಂದು ಕ್ರಿಕೆಟ್‌ ಲಾಂಗ್‌ ವರದಿಯೊಂದು ಕಂಡು ಬಂದಿದ್ದು ಅದರಲ್ಲಿ “Watch: Rohit Sharma Visits Tirupati Balaji Temple Ahead Of Asia Cup 2023.” ಎಂದು ಶೀರ್ಷಿಕೆಯನ್ನು ನೀಡಿತ್ತು. ಈ ವರದಿಯ ಪ್ರಕಾರ , ಭಾರತದ ಕ್ರಿಕೆಟ್‌ ತಂಡದ ನಾಯಕ ಮತ್ತು ಅವರ ಕುಟುಂಬವು ಏಷ್ಯಾ ಕಪ್ 2023 ರ ಮೊದಲು ಆಂಧ್ರಪ್ರದೇಶದ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿತು ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಇತ್ತೀಚೆಗೆ ವಿಶ್ವಕಪ್‌ನಲ್ಲಿ ಭಾರತ ಗೆಲವು ಸಾಧಿಸಿದ ಬಳಿಕ ಭಾರತ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾ ಅವರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿರುವ ಫೋಟೋ 2023 ರದ್ದಾಗಿದೆ. ಇದನ್ನೇ ದುರ್ಬಳಕೆ ಮಾಡಿಕೊಂಡಿರುವ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ.


ಇದನ್ನೂ ಓದಿ : Fact Check: ಜವಹರಲಾಲ್ ನೆಹರು ಮೂಲತಃ ಮುಸ್ಲಿಂ ಕುಟುಂಬದವರು ಎಂದು ಸುಳ್ಳು ಹಂಚಿಕೊಳ್ಳುತ್ತಿರುವ ಬಿಜೆಪಿ ಬೆಂಬಲಿಗರು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *