Fact Check |ಕಮಲಾ ಹ್ಯಾರಿಸ್ ಅಮೆರಿಕದ ಅಧ್ಯಕ್ಷೆ ಆಗಲು ಅನರ್ಹರಾಗಿದ್ದಾರೆ ಎಂಬುದು ಸುಳ್ಳು

“ಕಮಲಾ ಹ್ಯಾರಿಸ್ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಧ್ಯಕ್ಷರ ಹುದ್ದೆಯನ್ನು ಅಲಂಕರಿಸಲು ಅನರ್ಹರಾಗಿದ್ದಾರೆ. ಏಕೆಂದರೆ ಆಕೆಯ ಜನನದ ಸಮಯದಲ್ಲಿ ಅವರ ಪೋಷಕರು ಯುಎಸ್ಎ ಪ್ರಜೆಗಳಾಗಿರಲಿಲ್ಲ. ಹಾಗಾಗಿ ಈ ಬಾರಿ ಕಮಲಾ ಹ್ಯಾರಿಸ್‌ ಅವರು ಅಧ್ಯಕ್ಷ ಗಾದಿಯ ರೇಸ್‌ನಿಂದ ಹೊರ ಉಳಿಯಲಿದ್ದಾರೆ. ಇದಕ್ಕೆ ಪೂರಕವಾಗಿ ಹಲವು ದಾಖಲೆಗಳು ಕೂಡ ಲಭ್ಯವಾಗಿದ್ದು, ಈಗ ಅಮೆರಿಕದ ಉಪಾಧ್ಯಕ್ಷೆಯಾಗಿ ಮುಂದುವರೆದಿರುವ ಅವರು ಇನ್ನು ಮುಂದೆ ಉನ್ನತ ಹುದ್ದೆಯನ್ನು ಅಲಂಕರಿಸಲು ಸಾಧ್ಯವಿಲ್ಲ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಇದೇ ಸುದ್ದಿಯನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಇದಕ್ಕೆ ಬೇರೆ ಬೇರೆ ಆಯಾಮವನ್ನು ನೀಡುತ್ತಿದ್ದು, ಅವುಗಳನ್ನು ಕೂಡ ಹಲವಾರು ಮಂದಿ ಪರಿಶೀಲಿಸದೆ ಹಂಚಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಸುದ್ದಿಗಳ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಈ ಸುದ್ದಿಯ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್‌ ಸುದ್ದಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಮತ್ತು ಅಮೆರಿಕದಲ್ಲಿ ಕಾನೂನು ಅಥವಾ ಅಕ್ರಮ ವಲಸಿಗರಿಗೆ ಜನಿಸಿದ ಮಕ್ಕಳ ಬಗ್ಗೆ ಪೌರತ್ವ ಕಾನೂನುಗಳು ಏನು ಹೇಳುತ್ತವೆ ಎಂಬುದನ್ನು ತಿಳಿದುಕೊಳ್ಳಲು ನಾವು ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದ್ದೇವೆ. ಆಗ ದಾಖಲೆಯೋಂದು ಪತ್ತೆಯಾಗಿದ್ದು ಅದನ್ನೇ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ತಿಳಿದು ಬಂದಿದೆ

ಇನ್ನಷ್ಟು ಹುಡುಕಾಟ ನಡೆಸಿದಾಗ ನಮಗೆ ಅಮೇರಿಕನ್ ಇಮಿಗ್ರೇಷನ್ ಕೌನ್ಸಿಲ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿರುವ “ ಇಮಿಗ್ರೇಷನ್ ಪಾಲಿಸಿ ಸೆಂಟರ್‌ ಪೆರ್ಸ್ಪೆಕ್ಟಿವ್ಸ್‌” ಎಂಬ ಶೀರ್ಷಿಕೆಯ ಡಾಕ್ಯುಮೆಂಟ್‌ ಕಂಡು ಬಂದಿದೆ. ಅದರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಜನಿಸಿದ ಕಾನೂನುಬದ್ಧ ಮತ್ತು ಅಕ್ರಮ ವಲಸಿಗರ ಮಕ್ಕಳು US ನೆಲದಲ್ಲಿ ಜನಿಸಿದ ಕಾರಣದಿಂದ US ನಾಗರಿಕರಾಗಿದ್ದಾರೆ ಎಂದು ಉಲ್ಲೇಖಿಸಿರುವುದು ಕಂಡು ಬಂದಿದೆ. ಹೀಗಾಗಿ ಅಮೆರಿಕದ ನಾಗರೀಕರಾಗಿ ಜನಿಸಿದವರು ಅಲ್ಲಿನ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸಬಹುದಾಗಿದೆ.

ಇನ್ನು ಕಮಲಾ ಹ್ಯಾರಿಸ್‌ ಅವರ ಬಗ್ಗೆ ಅಲ್ಲಿನ ಶ್ವೇತಭವನದಲ್ಲಿನ ಮಾಹಿತಿಯನ್ನು ಪರಿಶೀಲನೆ ನಡೆಸಿದಾಗ  ಕಮಲಾ ಹ್ಯಾರಿಸ್ ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್‌ನಲ್ಲಿ ಜನಿಸಿದರು.ಕಮಲಾ ಹ್ಯಾರಿಸ್ ಅವರು ಅಲ್ಲಿಯೇ ಜನಿಸಿದ ಕಾರಣ ಅವರು ಅಮೆರಿಕದ ಪ್ರಜೆಯಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇನ್ನು ಅಲ್ಲಿನ ಕಾನೂನಿನ ಪ್ರಕಾರವಾಗಿ ಕಮಲಾ ಹ್ಯಾರಿಸ್‌ ಅವರ ಪೋಷಕರು ಅಮೆರಿಕದ ಅಧಿಕೃತ ಪ್ರಜೆಗಳಾಗಿ ಇಲ್ಲದೇ ಇದ್ದರು, ಕಮಲಾ ಹ್ಯಾರಿಸ್‌ ಅವರು ಅಮೆರಿಕದಲ್ಲಿ ಜನಿಸಿದ ಕಾರಣ ಅವರು ಆ ದೇಶದ ಪ್ರಜೆಯಾಗುತ್ತಾರೆ. ಹಾಗಾಗಿ ಅಮೆರಿಕದ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಕಮಲಾ ಹ್ಯಾರಿಸ್‌ ಅವರು ಅನರ್ಹ ಎಂಬುದು ಸುಳ್ಳು ಎಂದು ಸಾಬೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಮಲಾ ಹ್ಯಾರಿಸ್ ಅವರು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕದ ನಾಗರಿಕರಾಗಿದ್ದಾರೆ ಮತ್ತು ಅವರು ಯುಎಸ್ ಅಧ್ಯಕ್ಷ ಹುದ್ದೆಯನ್ನು ಹೊಂದಲು ಅರ್ಹರಾಗಿದ್ದಾರೆ. ಹಾಗಾಗಿ ಈ ಕುರಿತು ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನೂ ಓದಿ : Fact Check | ಬೆಂಗಳೂರು ಬಸ್‌ನಲ್ಲಿ ಬಾಂಬ್ ಸ್ಫೋಟಗೊಂಡಿದೆ ಎಂದು ಸುಳ್ಳು ಮಾಹಿತಿ ವೈರಲ್‌


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *