Fact Check: ಏಕರೂಪ ನಾಗರಿಕ ಸಂಹಿತೆ ಜಾರಿಗೊಳ್ಳದೇ ಇದ್ದರೆ ಭಾರತದಲ್ಲಿ ಹಿಂದುಗಳು ಹಿಂದುಳಿದವರಾಗುತ್ತಾರೆ ಎಂಬುದು ಸುಳ್ಳು

ಕಳೆದೊಂದು ದಶಕಗಳಿಂದ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿ ಹಿಂದುಗಳೇ ಹಿಂದುಳಿದವರಾಗುವ ಸಾಧ್ಯತೆ ಇದೆ ಮತ್ತು ಭಾರತ ಮುಸ್ಲಿಂ ರಾಷ್ಟ್ರವಾಗುತ್ತದೆ ಎಂದು ಬಿಂಬಿಸಲು ಅನೇಕ ವಾದಗಳನ್ನು, ಪ್ರತಿಪಾದನೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ, ವೀಡಿಯೋ, ವರದಿಗಳನ್ನು ಹಂಚಿಕೊಳ್ಳುವ ಮೂಲಕ ಮುಸ್ಲಿಮರಿಂದ ಜನಸಂಖ್ಯಾ ಜಿಹಾದಿ ನಡೆಯುತ್ತಿದೆ ಎಂದು ನಿರೂಪಿಸಲು ಬಿಜೆಪಿ ಮತ್ತು ಬಲಪಂಥೀಯ ಬೆಂಬಲಿಗರು ಮತ್ತು ಅವರ ನೇತೃತ್ವದ ಮಾಧ್ಯಮಗಳು ಇನ್ನಿಲ್ಲದಂತೆ ಪ್ರಯತ್ನ ನಡೆಸುತ್ತಿದ್ದಾರೆ.

ಈ ಮೂಲಕ ಹಿಂದುಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿ ನಾವು ಅವರಿಗೆ ಗುಲಾಮರಂತೆ ಬದುಕಬೇಕಾಗುತ್ತದೆ ಎಂಬ ಆತಂಕವನ್ನು ಹುಟ್ಟುಹಾಕಲಾಗಿದೆ. ಈ ಕುರಿತಂತೆ ಹೀಗಾಗಲೇ ಅನೇಕ ಸುಳ್ಳುಗಳನ್ನು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಸತ್ಯಶೋಧನೆ ನಡೆಸಿದ್ದು. ನಿಜವಾಗಿಯೂ ಭಾರತದಲ್ಲಿ ಮುಂಬರುವ ದಿನಗಳಲ್ಲಿ ಹಿಂದುಗಳಿಗಿಂತ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಲಿದೆಯೇ? ಜನಸಂಖ್ಯಾ ಜಿಹಾದಿ ಎನ್ನುವುದು ನಡೆಯುತ್ತಿದೆಯೇ? ಎಂಬದಕ್ಕೆ ಸಾಕ್ಷಿ ಸಮೇತ ವರದಿಗಳನ್ನು ಮಾಡಿದೆ.

ಈಗ, ಒ. ಶ್ಯಾಮ್ ಭಟ್ ಎಂಬ ವಕೀಲರೊಬ್ಬರು ಕನ್ನಡದ ಬಲಪಂಥೀಯ ಮಾಧ್ಯಮವಾದ ಸಂವಾದದಲ್ಲಿ “ಒಬ್ಬ ಹಿಂದು ಹುಡುಗ 18 ವರ್ಷದ ಕೆಳಗಿನ ಹುಡುಗಿಯನ್ನು ಮದುವೆಯಾದರೆ, ಅವನಿಗೆ ತಕ್ಷಣ ಕೇಸುಗಳನ್ನು ಹಾಕುತ್ತಾರೆ. ಒಬ್ಬ ಮುಸಲ್ಮಾನ 12-13 ವರ್ಷದ ಹುಡುಗಿಯನ್ನು ಮದುವೆಯಾದರೂ ಕೂಡ ಅವನು ಇಸ್ಮಾಮಿಕ್ ಕಾನೂನಿನ ಒಳಗಿನಿಂದ ಈಚೆಗೆ ಬರುತ್ತಾನೆ. ಅವನ ಮೇಲೆ ಯಾವುದೇ ಕೇಸು ದಾಖಲಾಗುದಿಲ್ಲ. ಕಾನೂನಿನಲ್ಲಿ ಇದೇ ವ್ಯವಸ್ಥೆ ಮುಂದುವರೆದರೆ, ಕೆಲವೇ ವರ್ಷಗಳಲ್ಲಿ ಈ ದೇಶದಲ್ಲಿ ಹಿಂದುಗಳು ಮೈನಾರಿಟಿಗೆ ಬರುವುದರಲ್ಲಿ ಯಾವುದೇ ಸಂಶಯ ಇಲ್ಲ. ಸಮಾನ ನಾಗರೀಕ ಕಾನೂನು ಬಾರದೇ ಇದ್ದರೆ ಮುಂದಿನ ದಿನಗಳಲ್ಲಿ ಯಾವ ಯಾವ ಅವಾಂತರಗಳನ್ನು ಆಗಬಹುದು ಎಂದು ನೋಡಬಹುದು” ಎಂದು ಹೇಳಿದ್ದಾರೆ ಮುಂದುವರೆದು ನಾವು ಬಿಜೆಪಿ ಸರ್ಕಾರವನ್ನು ಗೆಲ್ಲಿಸಿದ್ದು ಸಮಾನ ನಾಗರೀಕ ಕಾನೂನು ತರಲಿ ಎಂಬ ಉದ್ದೇಶದಿಂದ. ನಾವೆಲ್ಲರೂ ಈಗ ಈ ಕಾನೂನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದಿದ್ದಾರೆ.

ಈ ವಿಡಿಯೋವನ್ನು “ಏಕರೂಪ ನಾಗರೀಕ ಕಾನೂನು ಬರದಿದ್ದರೆ ತನ್ನದೇ ದೇಶದಲ್ಲಿ ಹಿಂದು ಅಲ್ಪಸಂಖ್ಯಾತ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್: ಈ ವೀಡಿಯೋದಲ್ಲಿ ಹಿರಿಯ ವಕೀಲ ಶ್ಯಾಮ್ ಭಟ್ ಅವರು ಪ್ರತಿಪಾದಿಸಿರುವಂತೆ ಮುಂಬರುವ ದಿನಗಳಲ್ಲಿ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿ ಹಿಂದುಗಳೇ ಅಲ್ಪಸಂಖ್ಯಾತರಾಗುತ್ತಾರೆ ಎಂಬ ಮಾಹಿತಿ ಸುಳ್ಳು ಮತ್ತು ಇದು ಕೋಮುಭಾವನೆಯಿಂದ ನೀಡಿರುವ ಹೇಳಿಕೆಯಾಗಿದೆ. ಶ್ಯಾಮ್ ಭಟ್ ಅವರ ಹೇಳಿಕೆಗಳಿಗೆ ಪೂರಕವಾಗಿ ನಮಗೆ ಯಾವ ಅಧಿಕೃತ ಮಾಹಿತಿಗಳು ಸಹ ಲಭ್ಯವಿಲ್ಲ.

2011 ರ ಭಾರತದ ಜನಗಣತಿಯ ಅಧಿಕೃತ ಮಾಹಿತಿಯ ಪ್ರಕಾರ ಭಾರತದಲ್ಲಿನ ಮುಸ್ಲಿಮರ ಜನಸಂಖ್ಯೆ ಕೇವಲ 17.22 ಕೋಟಿ ಅಂದರೆ ‘14.2%’ ಮಾತ್ರ. ಆದರೆ ಹಿಂದುಗಳ ಜನಸಂಖ್ಯೆ 96.63 ಕೋಟಿ ಇದ್ದು ಒಟ್ಟು ಭಾರತೀಯ ಜನಸಂಖ್ಯೆಯಲ್ಲಿ 79.8% ಇದ್ದಾರೆ. ಹೀಗಿರುವಾಗ ಮುಸ್ಲಿಮರ ಜನಸಂಖ್ಯೆಗಿಂತ ಅತಿ ಹೆಚ್ಚು ಪಟ್ಟು ಹಿಂದುಗಳೇ ಇದ್ದಾರೆ. ಮತ್ತು ಮುಂಬರುವ ದಿನಗಳಲ್ಲಿಯೂ ಸಹ ಭಾರತದಲ್ಲಿ ಹಿಂದುಗಳ ಜನಸಂಖ್ಯೆಯೇ ಗಣನೀಯವಾಗಿ ಹೆಚ್ಚಾಗಲಿದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದು.

ಪ್ರೆಸ್‌ ಇನ್ಫರ್ಮೇಷನ್ ಬ್ಯೂರೋ(PIB) ಅಧಿಕೃತ ಧಾಖಲೆಯಲ್ಲಿ 2011ರ ಜನಗಣತಿಯ ಮಾಹಿತಿಯನ್ನು ಈ ಕೆಳಗೆ ನೋಡಬಹುದು.

ಸಧ್ಯ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತದೆ ಎಂದು ಸುಳ್ಳು ಹಬ್ಬಿಸಲು ಕಾರಣ ಈ ಆತಂಕವನ್ನೇ ಮುಂದೆ ಮಾಡಿ ಹಿಂದುಗಳ ಮತಗಳ ಪಡೆಯುವುದೇ ಆಗಿದೆ. ಆ ಕಾರಣಕ್ಕಾಗಿಯೇ ಪ್ರತೀ 10 ವರ್ಷಗಳಿಗೊಮ್ಮೆ ನಡೆಯಬೇಕಾದ ಅಂದರೆ 2021ರಲ್ಲಿ ನಡೆಯಬೇಕಾದ ಜನಗಣತಿಯನ್ನು ನಡೆಸದೇ ಇರುವುದು ಸಹ ಧರ್ಮಾಧರಿತ ರಾಜಕಾರಣ ಭಾಗವಾಗಿರಬಹುದು.

ಇನ್ನೂ ಶ್ಯಾಮ್ ಭಟ್ ಅವರು ಉಲ್ಲೇಖಿಸಿರುವ 2022ರ ದೆಹಲಿ ಹೈಕೋರ್ಟ್‌ನ ತೀರ್ಪಿನ ಅಥವಾ ಪ್ರಕರಣದ ಕುರಿತು ಮಾತನಾಡುವುದಾದರೆ, ಭಾರತದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅನ್ವಯ ಕಾಯಿದೆ, 1937ರ ಪ್ರಕಾರ ಹೆಣ್ಣು ಮಗಳು ತಾನು ಫ್ರೌಢವಸ್ಥೆಗೆ ತಲುಪಿದ ನಂತರ ತಾನು ಇಚ್ಚಿಸಿದವರನ್ನು ಪ್ರೀತಿಸುವ, ಮದುವೆಯಾಗುವ ಅಧಿಕಾರವನ್ನು ನೀಡುತ್ತದೆ. ಇದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೂ ಸಹ ತನ್ನ ಇಚ್ಚೆಗನುಸಾರ ಮದುವೆ ಆಗಬಹುದು.

ಶ್ಯಾಮ್ ಭಟ್ ಅವರು ಉಲ್ಲೇಖಿಸಿರುವ ಪ್ರಕರಣದಲ್ಲಿ ಬಾಲಕಿಗೆ 18 ವಯಸ್ಸು ತುಂಬದೇ ಇದ್ದರು(ಫ್ರೌಢವಸ್ಥೆಗೆ ತಲುಪಿದ್ದಾಳೆ, 15 ವರ್ಷ) ಇಸ್ಲಾಂ ಧರ್ಮದ ಪ್ರಕಾರ ಶಾಸ್ತ್ರಬದ್ಧವಾಗಿ ಬಾಲಕಿ ಮತ್ತು ಯುವಕನ ಒಪ್ಪಿಗೆಯಲ್ಲಿ, ಎರಡೂ ಕಡೆಯ ಮನೆಯವರ ನೇತೃತ್ವದಲ್ಲಿ ಮದುವೆ(ನಿಖಾ) ನಡೆದಿದೆ. ಮತ್ತು ಮದುವೆ ಆದ ಬಳಿಕ ಅವರು ಲೈಂಗಿಕವಾಗಿಯೂ ಮುಂದುವರೆದಿದ್ದಾರೆ. ನಂತರ ಬಾಲಕಿಯ ಗಂಡನ ಮೇಲೆ POSCO ಕಾಯ್ದೆಯಡಿಯಲ್ಲಿ ಬಂಧಿಸಲಾಗಿದೆ. ಮತ್ತು ಈ ಕೇಸನ್ನು ದಾಖಲಿಸಿರುವವನು ಬಾಲಕಿಯನ್ನು ಮದುವೆಗಿಂತ ಮುಂಚೆ ಪ್ರೀತಿಸಿದ್ದ ಯುವಕ.

ಆದ್ದರಿಂದ ಮಾನ್ಯ ದೆಹಲಿ ಹೈಕೋರ್ಟ್‌ ಪೋಸ್ಕೋ ಕಾಯ್ದೆಯನ್ನು ಜಾರಿಗೆ ತಂದಿರುವುದು 18 ವರ್ಷದೊಳಗಿನ ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯವನ್ನು ತಡೆಯುವ ಸಲುವಾಗಿ ಮತ್ತು ಬಾಲ್ಯವಸ್ಥೆಗೆ ಯಾವುದೇ ದಕ್ಕೆಯಾದಂತೆ ಅವರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವನ್ನು ನಿಯಂತತ್ರಿಸುವ ಸಲುವಾಗಿ. ಆದರೆ ಈ ಪ್ರಕರಣದಲ್ಲಿ ಬಾಲಕಿ ಮತ್ತು ಯುವಕ ಮುಸ್ಲಿಂ ವೈಯಕ್ತಿಕ ಕಾನೂನಿನನ್ವಯ ಬಾಲಕಿ ಮತ್ತು ಪೋಷಕರ ಒಪ್ಪಿಗೆ ಪಡೆದು ಮದುವೆ ನಡೆದಿದೆ. ಮತ್ತು ಮದುವೆಯ ಬಳಿಕ ಲೈಂಗಿಕವಾಗಿಯೂ ಮುಂದುವರೆ ಇದ್ದಾರೆ. ಇಲ್ಲಿ ಲೈಂಗಿಕ ದೌರ್ಜನ್ಯದಂತಹ ಯಾವುದೇ ಸಂದರ್ಭ ಏರ್ಪಟ್ಟಿಲ್ಲ. ಒಂದು ವೇಳೆ ಮದುವೆಗೂ ಮುಂಚೆ ಯುವಕ ಬಾಲಕಿಯ ಇಚ್ಚೆಯ ವಿರುದ್ಧ ಲೈಂಗಿಕವಾಗಿ ಮುಂದುವರೆದಿದ್ದರೆ ಆತ ತಪ್ಪಿತಸ್ಥ ಆಗಿರುತ್ತಿದ್ದ.

ಆದರೆ ಈಗ ಅವರ ಮದುವೆ ನಡೆದಿದೆ. ಅವರ ವೈಯಕ್ತಿಕ ಬದುಕಿಗೆ ನಾವು ತೊಂದರೆ ಕೊಡಲು ಬರುವುದಿಲ್ಲ. ಅದೂ ಅಲ್ಲದೇ ಈಗ ಇಬ್ಬರನ್ನೂ ದೂರ ಮಾಡಿದರೆ ಬಾಲಕಿ ಟ್ರಾಮಗೇ ಹೋಗುವ ಸ್ಥಿತಿಯಿದೆ ಮತ್ತು ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೂ ಇದು ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಈ ಪ್ರಕರಣ ಇನ್ನಷ್ಟು ಸಂಕೀರ್ಣವಾಗಿದ್ದು ಲೈವ್ ಲಾ(Live Law) ದಲ್ಲಿ ಈ ಪ್ರಕರಣದ ಸಂಪೂರ್ಣ ವಿವರಗಳು ಇದ್ದು, ನೀವದನ್ನು ಇಲ್ಲಿ ಓದಬಹುದು. 

ಇನ್ನೂ ಮುಸ್ಲಿಂ ಸಮುದಾಯದಲ್ಲಿ ಜನನ ದರ ಹೆಚ್ಚಾಗುತ್ತಿದೆ ಎಂದು ಸಹ ಸುಳ್ಳು ಹಬ್ಬಿಸಲಾಗುತ್ತಿತ್ತು ಆದರೆ.  NHFS-5ರ ವರದಿಯಂತೆ ಕಳೆದ ಮೂರು ದಶಕಗಳಲ್ಲಿ ಹಿಂದೂ ಮಹಿಳೆಯರ ಫಲವತ್ತತೆಯ ದರ 3.3 ನಿಂದ 1.9 ಗೆ ಕುಸಿದರೆ, ಮುಸ್ಲಿಂ ಮಹಿಳೆಯರಲ್ಲಿನ ಫಲವತ್ತತೆಯ ದರ ಸಹ 4.4 ನಿಂದ 2.3ಗೆ ಕುಸಿದಿದೆ. 2030ರ ವೇಳೆಗೆ ಎರಡೂ ಧರ್ಮದ ಫಲವತ್ತತೆಯ ದರ ಸಮಾನಂತರಕ್ಕೆ ಬರಬಹುದು ಎಂದು ಸಮೀಕ್ಷೆಗಳು ಹೇಳಿವೆ.

ಆದ್ದರಿಂದ 18 ವರ್ಷದೊಳಗಿನ ಬಾಲಕಿಯನ್ನು ಮದುವೆ ಮಾಡುವುದು ವೈಜ್ಞಾನಿಕವಾಗಿ ಮತ್ತು ಮಕ್ಕಳ ಆರೋಗ್ಯದ ದೃಷ್ಟಿಯಿಂದ ತಪ್ಪಿದರೂ, ಮುಸ್ಲಿಂ ವಿವಾಹ ಕಾಯ್ದೆಯಲ್ಲಿ  ಬದಲಾವಣೆಯನ್ನು ತರುವ ಅಗತ್ಯವಿದ್ದರೂ, ಇದನ್ನೇ ನೆಪ ಮಾಡಿಕೊಂಡು ಏಕರೂಪ ನಾಗರೀಕ ಸಂಹಿತೆಯನ್ನು ಜಾರಿಗೊಳಿಸಿದ್ದರೆ ಮುಂಬರುವ ದಿನಗಳಲ್ಲಿ ಮುಸ್ಲಿಂ ಜನಸಂಖ್ಯೆ ಭಾರತದಲ್ಲಿ ಹಿಂದುಗಳಿಂತ ಹೆಚ್ಚಾಗುತ್ತದೆ ಎಂಬುದು ಸುಳ್ಳು. ಮುಸ್ಲಿಂ ಜನಸಂಖೆಗೂ ಏಕರೂಪ ನಾಗರಿಕ ಸಂಹಿತೆ ಕಾನೂನಿಗೂ ಯಾವುದೇ ಸಂಬಂಧವಿಲ್ಲ.


ಇದನ್ನು ಓದಿ: ಭಾರತದಲ್ಲಿ ಹಿಂದೂಗಳಿಗಿಂತ ಮುಸ್ಲಿಂ ಜನನ ದರ ಹೆಚ್ಚಾಗಿದೆ ಎಂಬುದು ಸುಳ್ಳು


ವೀಡಿಯೋ ನೋಡಿ: ಹಿಂದೂ ಜನಸಂಖ್ಯೆ ಕುಸಿತ, ಮುಸ್ಲಿಂ ಜನಸಂಖ್ಯೆ ಏರಿಕೆ ಎಂಬ ವರದಿ ದಿಕ್ಕು ತಪ್ಪಿಸುವಂತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *