Fact Check | ಡಿ ಮಾರ್ಟ್‌ನ 22ನೇ ವಾರ್ಷಿಕೋತ್ಸವಕ್ಕೆ 65,402.40 ರೂ ಗೆಲ್ಲಬಹುದು ಎಂಬುದು ಸುಳ್ಳು ಸುದ್ದಿ

“ಅಭಿನಂದನೆಗಳು.. ಡಿಮಾರ್ಟ್‌ 22ನೇ ವಾರ್ಷಿಕೋತ್ಸವದ ಉಡುಗೊರೆ. ಕೆಲವೊಂದು ಪ್ರಶ್ನೋತ್ತರಗಳ ಮೂಲಕ ನೀವು 65,402.40 ರೂ. ಪಡೆಯಬಹುದು. ಪ್ರಶ್ನೆ 1. ನಿಮಗೆ ಡಿ ಮಾರ್ಟ್‌ ಬಗ್ಗೆ ತಿಳಿದಿದೆಯೇ? A.ಹೌದು  B. ಇಲ್ಲ” ಎಂದು ವೆಬ್‌ಸೈಟ್‌ವೊಂದರ ಫೋಟೋವೊಂದನ್ನು ಹಂಚಿಕೊಂಡು ಸಾಕಷ್ಟು ಮಂದಿ ಡಿಮಾರ್ಟ್‌ನ ವಾರ್ಷಿಕೋತ್ಸವಕ್ಕೆ ಉಡುಗೊರೆಯನ್ನು ನೀಡಲಾಗುತ್ತಿದೆ. ನೀವು ಭಾಗವಹಿಸಿ ಎಂದು ಹಲವರು ಹಂಚಿಕೊಳ್ಳುತ್ತಿದ್ದಾರೆ.

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಡಿಮಾರ್ಟ್‌ ವಾರ್ಷಿಕೋತ್ಸವದ ಲಿಂಕ್‌ ಎನ್ನಲಾದ ವೆಬ್‌ ಲಿಂಕ್‌ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪ್ರಶ್ನೆಗಳಿಗೆ ಉತ್ತರಿಸಿದವರು. ಈ ಲಿಂಕ್‌ ಅನ್ನು ಹಲವು ಗ್ರೂಪ್‌ಗಳಿಗೆ ಶೇರ್‌ ಮಾಡಿದ ಬಳಿಕ ನಿಮಗೆ ಈ  ಉಡುಗೊರೆ ಬಂದು ಸೇರಲಿದೆ ಎಂದು ಹಲವರು ಹಂಚಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಡಿಮಾರ್ಟ್‌ ತನ್ನ 22 ವರ್ಷದ ವಾರ್ಷಿಕೋತ್ಸವಕ್ಕೆ ಈ ರೀತಿಯ ಕೊಡುಗೆ ನೀಡುತ್ತಿರುವ ಕುರಿತು ಹಲವು ಅನುಮಾನಗಳೇ ಮೂಡುತ್ತಿವೆ. ಹಾಗಾಗಿ ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು? ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಹೀಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಡಿಮಾರ್ಟ್‌ನ ಈ ಲಿಂಕ್‌ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಪೋಸ್ಟ್‌ನ ಕುರಿತು ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಒಂದು ವೇಳೆ ಯಾವುದಾದರು ಒಂದು ಸಂಸ್ಥೆ ಇಷ್ಟು ದೊಡ್ಡ ಮಟ್ಟದ ಕೊಡುಗೆ ನೀಡಿದ್ದು ನಿಜವೇ ಆದಲ್ಲಿ, ಆ ಕುರಿತು ಸಾಕಷ್ಟು ಜಾಹಿರಾತುಗಳು ಪೇಪರ್‌ ಸೇರಿದಂತೆ ಅಂತರ್ಜಾಲದಲ್ಲಿ ಕಂಡು ಬರಬೇಕಿತ್ತು. ಆದರೆ ಇಲ್ಲಿ ಅಂತಹ ಯಾವುದೇ ಜಾಹಿರಾತುಗಳು ಕಂಡು ಬಂದಿಲ್ಲ.

ಇನ್ನು ಅಧಿಕೃತ ಮಾಹಿತಿಗಾಗಿ ಡಿ ಮಾರ್ಟ್‌ ಸಂಸ್ಥೆಯ ಆಡಳಿತ ವರ್ಗವನ್ನು ಸಂಪರ್ಕಿಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪ್ರಯತ್ನಿಸಿದರು ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಡಿಮಾರ್ಟ್‌ನ ಅಧಿಕೃತ ವೆಬ್‌ಸೈಟ್‌ ಅನ್ನು ಕೂಡ ನಾವು ಪರಿಶೀಲನೆ ನಡೆಸಿದೆವು. ಆದರೆ ಅಲ್ಲಿಯೂ ಕೂಡ ಈ ಬಗ್ಗೆ ಯಾವುದೇ ರೀತಿಯಾದ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಒಂದು ವೇಳೆ ಡಿ ಮಾರ್ಟ್‌ ನಿಜವಾಗಿಯೂ ಕೂಡ ಈ ರೀತಿಯಾದ ಉಡುಗೊರೆಯನ್ನು ನೀಡುತ್ತಿರುವುದು ನಿಜವೇ ಆಗಿದ್ದಲ್ಲಿ ಈ ಬಗ್ಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಹಲವು ಜಾಹಿರಾತುಗಳನ್ನು ನೀಡಬೇಕಾಗಿತ್ತು. ಆದರೆ ಆ ರೀತಿಯ ಯಾವುದೇ ಮಾಹಿತಿಗಳು ಡಿಮಾರ್ಟ್‌ನ ಅಧಿಕೃತ ವೆಬ್‌ಸೈಟ್‌ನಿಂದ ಕಂಡು ಬಂದಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ಲಿಂಕ್‌ ನಕಲಿಯಾಗಿದೆ. ಒಂದು ವೇಳೆ ನೀವು ಈ ಲಿಂಕ್‌ ಕ್ಲಿಕ್‌ ಮಾಡಿದ್ದೇ ಆದಲ್ಲಿ ನಿಮ್ಮ ಮೋಬೈಲ್‌ ಅಥವಾ ಇನ್ನೀತರೆ ಡಿವೈಸ್‌ಗಳು ಹ್ಯಾಕ್‌ ಆಗುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ಎಚ್ಚರ ವಹಿಸಿ.


ಇದನ್ನೂ ಓದಿ : Fact Check | ನಿತೀಶ್ ಕುಮಾರ್‌ರವರಿಂದ ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸಿ ಪಾದಯಾತ್ರೆ ಎಂದು ಹಳೆಯ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *