Fact Check | ಇತ್ತೀಚೆಗೆ ಹರಿದ್ವಾರದ ಪ್ರವಾಹ ಎಂದು 2011ರ ಜಪಾನಿನ ವಿಡಿಯೋ ತಪ್ಪಾಗಿ ಹಂಚಿಕೆ

“ಈ ವಿಡಿಯೋವನ್ನು ನೋಡಿ ಇದು ಹರಿದ್ವಾರದಲ್ಲಿ ಉಂಟಾದ ಭೀಕರ ಪ್ರವಾಹದ ದೃಶ್ಯಗಳು. ಇತ್ತೀಚೆಗೆ ಭಾರತದಲ್ಲಿ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದು, ಈ ಅವಧಿಯಲ್ಲಿ ಪ್ರವಾಸಕ್ಕೆ ಹೊರಡುವ ಮುನ್ನ ಎಚ್ಚರ. ಇಲ್ಲಿದಿದ್ದರೆ ಇಂತಹ ಭಯಾನಕ ಪ್ರವಾಹಕ್ಕೆ ನೀವು ಕೂಡ ಸಿಕ್ಕಿ ಬೀಳುವ ಸಾಧ್ಯತೆ ಇದೆ.” ಎಂದು ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಉತ್ತರ ಭಾರತದಲ್ಲಿ ಕೂಡ ಮಳೆ ವೇಗವನ್ನು ಪಡೆದುಕೊಳ್ಳುವ ಕುರಿತು ಕೆಲವೊಂದು ವರದಿಗಳು ಕೂಡ ಕಂಡು ಬಂದಿದೆ.

ಹೀಗಾಗಿ ಈ ವಿಡಿಯೋ ನೋಡಿದ ಹಲವರು ನಿಜಕ್ಕೂ ವೈರಲ್‌ ವಿಡಿಯೋ ಹರಿದ್ವಾರಕ್ಕೆ ಸಂಬಂದಿಸಿದ್ದು ಎಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ವಿಡಿಯೋ ನಿಜಕ್ಕೂ ಹರಿದ್ವಾರಕ್ಕೆ ಸಂಬಧಿಸಿದೆಯೆ ಎಂಬ ಅನುಮಾನವನ್ನು ಕೂಡ ಸಾರ್ವಜನಿಕ ವಲಯದಲ್ಲಿ ಮೂಡಿಸಿದೆ. ಇದಕ್ಕೆ ಕಾರಣ ವಿಡಿಯೋದಲ್ಲಿನ ಕೆಲವೊಂದು ಸ್ಥಳಗಳಿಗೆ ಮತ್ತು ಹರಿದ್ವಾರಕ್ಕೂ ಹೋಲಿಕೆಯಾಗದಿರುವುದು ಸೇರಿದಂತೆ ಹಲವು ಲೋಪಗಳು ವಿಡಿಯೋಗಳಲ್ಲಿ ಕಂಡು ಬಂದಿದೆ. ಹಾಗಾಗಿ ಈ ಫ್ಯಾಕ್ಟ್‌ಚೆಕ್‌ನಲ್ಲಿ ವೈರಲ್‌ ವಿಡಿಯೋವಿನ ಸತ್ಯವೇನು ಎಂದು ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್ಸ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ 25 ಫೆಬ್ರವರಿ 2021 ರಂದು ಜಪಾನ್‌ನ ಪ್ರಮುಖ ಮಾಧ್ಯಮ ಔಟ್ಲೆಟ್ TBS ನ್ಯೂಸ್ ಡಿಗ್‌ನಲ್ಲಿ ಈ ವೈರಲ್‌ ವಿಡಿಯೋ ಕಂಡು ಬಂದಿದೆ. ಹರಿದ್ವಾರದ್ದು ಎನ್ನಲಾದ ಪ್ರವಾಹದ ಕೀ ಫ್ರೇಮ್‌ಗಳಿಗೂ ಈ ಮಾಧ್ಯಮ ಔಟ್ಲೆಟ್‌ನಲ್ಲಿ ಕಂಡು ಬಂದ ಫೋಟೋಗಳಿಗೂ ಹೋಲಿಕೆಯಾಗಿರುವುದು ಪತ್ತೆಯಾಗಿದೆ.

ಈ ಫೋಟೋ ಕುರಿತು ಹೆಚ್ಚಿನ ಮಾಹಿತಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟವನ್ನು ನಡೆಸಿದಾಗ “ಮಾರ್ಚ್ 11, 2011 ರಂದು ಜಪಾನ್‌ನ ಮಿಯಾಕೊ ಕರಾವಳಿಗೆ ಅಪ್ಪಳಿಸಿದ ಮಾರಣಾಂತಿಕ ಸುನಾಮಿ” ಎಂದು ಅನುವಾದಿಸಲಾದ ಜಪಾನೀ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ ಎಂಬುದು ತಿಳಿದು ಬಂದಿದ್ದು, ಈ ವಿಡಿಯೋ 2011ಕ್ಕೆ ಸಂಬಂಧಿಸಿದ್ದಾಗಿದೆ ಎಂಬುದು ಖಚಿತವಾಗಿದೆ.

2011 ರ ಸುನಾಮಿಯ 10 ನೇ ವಾರ್ಷಿಕೋತ್ಸವದ ನೆನಪಿಗಾಗಿ 2021 ರಲ್ಲಿ ಅದೇ ಕ್ಲಿಪ್ ಅನ್ನು ಅಪ್‌ಲೋಡ್ ಮಾಡಿದ NHK ವರ್ಲ್ಡ್ – ಜಪಾನ್ ಹೆಸರಿನ ಚಾನಲ್‌ನ ವೀಡಿಯೊವನ್ನು ಸಹ ನಾವು ಕಂಡುಕೊಂಡಿದ್ದೇವೆ . 16:38 ನಂತರ , ಇದೇ ರೀತಿಯ ಫ್ರೇಮ್ ಅನ್ನು ಕಾಣಬಹುದಾಗಿದ್ದು, ಈ ವೈರಲ್‌ ವಿಡಿಯೋಗೂ ಹರಿದ್ವಾರಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ. ಇನ್ನು ಹರಿದ್ವಾರದಲ್ಲಿ ಕೂಡ ಪ್ರವಾಹ ಉಂಟಾಗಿರುವುದು ನಿಜ. ಈ ಕುರಿತು ಹಲವು ವರದಿಗಳು ಕೂಡ ಇವೆ. ಆದರೆ ಈ ಬಗ್ಗೆ ನೈಜ ವಿಡಿಯೋಗಳನ್ನು ಹಂಚಿಕೊಳ್ಳದೆ ಜಪಾನ್‌ ಸುನಾಮಿಯ ವಿಡಿಯೋಗಳನ್ನು ಹಂಚಿಕೊಳ್ಳಕಾಗುತ್ತಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ 2011ರ ಜಪಾನ್‌ ಸುನಾಮಿಗೆ ಸಂಬಂಧಿಸಿದ್ದಾಗಿದೆ. ಇದೇ ವಿಡಿಯೋವನ್ನು ಬಳಸಿಕೊಂಡಿರುವ ಕಿಡಿಗೇಡಿಗಳು ಇದು ಹರಿದ್ವಾರದ ಪ್ರವಾದ ವಿಡಿಯೋ ಎಂದು ತಪ್ಪು ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ವೈರಲ್‌ ವಿಡಿಯೋದ ಜೊತೆಗಿನ ಪ್ರತಿಪಾದನೆ ಸಂಪೂರ್ಣವಾಗಿ ವಿಫಲವಾಗಿದೆ.


ಇದನ್ನೂ ಓದಿ : Fact Check | ಕ್ಯಾರಿಪಿಲ್ ಮಾತ್ರೆ ಡೆಂಗ್ಯೂ ವೈರಸ್ ಸೋಂಕನ್ನು ಗುಣಪಡಿಸುತ್ತದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *