Fact Check | ಹೊಸ ಕ್ರಿಮಿನಲ್ ಕಾನೂನು ಅಡಿಯಲ್ಲಿ ಭ್ರಷ್ಟ ಪೋಲೀಸ್ ಅಧಿಕಾರಿ ಬಂಧನ ಎಂದು ಹಳೆಯ ವಿಡಿಯೋ ಹಂಚಿಕೆ

“ಭಾರತದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳು 1 ಜುಲೈ 2024 ರಿಂದ ಜಾರಿಗೆ ಬಂದಿವೆ. ಇದರ ಪರಿಣಾಮ ಹೇಗಿದೆ ಗೊತ್ತಾ? ಲಂಚ ಪಡೆಯುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ತಕ್ಷಣವೇ  ಬಂಧಿಸಲಾಗಿದೆ. ಇದು ಹೊಸದಾಗಿ ಜಾರಿಗೆ ತಂದ ಕ್ರಿಮಿನಲ್ ಕಾನೂನುಗಳಿಂದ ಮಾತ್ರ ಸಾಧ್ಯವಾಗಿದೆ. ಈ ಕಾನೂನುಗಳು ಬಾರದೆ ಹೋಗಿದ್ದರೆ, ಇವರುಗಳು ಆರಾಮವಾಗಿ ಹೊರಗಡೆ ತಿರುಗಾಡುತ್ತಿದ್ದರು” ಎಂದು ಹೇಳುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌
                 ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌

ಈ ವಿಡಿಯೋ ನೋಡಿದ ಹಲವರು ಇದು ನಿಜವಾದ ವಿಡಿಯೋ ಎಂದು ಭಾವಿಸಿದ್ದಾರೆ. ಹೀಗಾಗಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ವೈರಲ್‌ ವಿಡಿಯೋದಲ್ಲಿ ಕೂಡ ಪೊಲೀಸ್‌ ಅಧಿಕಾರಿಯನ್ನು ಎಳೆದುಕೊಂಡು ಹೋಗುತ್ತಿರುವುದನ್ನು ನೋಡಬಹುದಾಗಿದೆ. ಆದರೆ ವೈರಲ್‌ ವಿಡಿಯೋ ನಿಜಕ್ಕೂ ಇತ್ತೀಚಿನದ್ದಾ? ಇತ್ತೀಚೆಗೆ ಈ ಘಟನೆ ನಡೆದಿದ್ದರೆ ಈ ಕುರಿತು ಯಾವುದಾದರು ವರದಿಯಾಗಿದೆಯೆ ಎಂದು ಅನುಮಾನಗಳು ಮೂಡುತ್ತಿವೆ. ಹಾಗಾಗಿ ವೈರಲ್‌ ವಿಡಿಯೋದ ಅಸಲಿಯತ್ತೇನು ಎಂಬುದನ್ನು ಈ ವರದಿಯಲ್ಲಿ ಪರಿಶೀಲಿಸೋಣ.

04-07-2024ರಂದು ವೈರಲ್‌ ವಿಡಿಯೋ ಯುಟ್ಯೂಬ್‌ನಲ್ಲಿ ಹಂಚಿಕೆ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ  17 ಜೂನ್ 2023 ರಂದು ಯುಟ್ಯುಬ್‌ನಲ್ಲಿ ಅಪ್‌ಲೋಡ್‌ ಮಾಡಲಾದ ವಿಡಿಯೋವೊಂದು ಕಂಡು ಬಂದಿದೆ. ಈ ವೀಡಿಯೊದ ಶೀರ್ಷಿಕೆಯು ಉತ್ತರ ಪ್ರದೇಶದ ಲಕ್ನೋದಲ್ಲಿರುವ BKT ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂಬುದು ದೃಢಪಟ್ಟಿದ್ದು, ಇದು ಒಂದು ವರ್ಷದ ಹಿಂದಿನ ಘಟನೆ ಎಂಬುದು ಕೂಡ ಖಚಿತವಾಗಿದೆ.

ಈ YouTube ವೀಡಿಯೊದ ಸುಳಿವುಗಳ ಆಧಾರದ ಮೇಲೆ ಹೆಚ್ಚಿನ ಹುಡುಕಾಟ ನಡೆಸಿದಾಗ 2023ರಲ್ಲಿ ಪ್ರಕಟವಾದ ಹಲವು ವರದಿಗಳು ಕಂಡು ಬಂದಿವೆ.  ಈ ವರದಿಗಳ ಪ್ರಕಾರ, ಲಕ್ನೋದ ಬಕ್ಷಿ ಕಾ ತಾಲಾಬ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಪ್ರದೀಪ್ ಪಾಂಡೆ ಎಂಬ ಪೊಲೀಸ್ ಇನ್ಸ್‌ಪೆಕ್ಟರ್, ಜೂನ್ 2023 ರಲ್ಲಿ ಜಮೀನು ಸಂಬಂಧಿತ ಪ್ರಕರಣದಲ್ಲಿ ಸಂತ್ರಸ್ತರಿಂದ 25,000 ರೂಪಾಯಿ ಮೊತ್ತವನ್ನು ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ಇಲಾಖೆಯ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ. ನಂತರ ಈತನನ್ನು ಬಂಧಿಸಲಾಯಿತು ಎಂದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಇತ್ತೀಚೆಗೆ ಜಾರಿಯಾದ ಹೊಸ ಕ್ರಿಮಿನಲ್‌ ಕಾನೂನುಗಳ ಅಡಿಯಲ್ಲಿ ಪೊಲೀಸ್‌ ಅಧಿಕಾರಿಯನ್ನು ತಕ್ಷಣವೇ ಬಂಧಿಸಲಾಗಿದೆ ಎಂಬ ವಿಡಿಯೋ ಹಳೆಯದ್ದಾಗಿದೆ ಮತ್ತು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಈ ರೀತಿಯ ವಿಡಿಯೋಗಳನ್ನು ಪರಿಶೀಲಿಸದೆ ಹಂಚಿಕೊಳ್ಳುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check | 2041ರ ಹೊತ್ತಿಗೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.84 ರಷ್ಟು ಏರಿಕೆಯಾಗಲಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *