Fact Check | 2041ರ ಹೊತ್ತಿಗೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.84 ರಷ್ಟು ಏರಿಕೆಯಾಗಲಿದೆ ಎಂಬುದು ಸುಳ್ಳು

“2041 ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು 84% ರಷ್ಟು ಇರಲಿದ್ದಾರೆ ಎಂದು ‘ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಡೆಮಾಗ್ರಾಫಿಕ್ಸ್ ರಿಸರ್ಚ್’ ಸಮೀಕ್ಷೆಯು ಭವಿಷ್ಯ ನುಡಿದಿದೆ. ಈ ಬಗ್ಗೆ ಹಿಂದೂಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರತದಲ್ಲಿನ ಹಿಂದೂಗಳು ಅಲ್ಪಸಂಖ್ಯಾತರಾಗುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ.” ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ. 

ವೈರಲ್‌ ಪೋಸ್ಟ್‌ನ ಅರ್ಕೈವ್‌ ಲಿಂಕ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ
          ವೈರಲ್‌ ಪೋಸ್ಟ್‌ನ ಅರ್ಕೈವ್‌ ಲಿಂಕ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಈ ಸಂದೇಶವನ್ನು ನೋಡಿದ ಹಲವರು ಇದು ನಿಜವಾದ ದತ್ತಾಂಶವಿರಬಹುದು ಎಂದು ಭಾವಿಸಿ ಈ ಸಂದೇಶವನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಸಂದೇಶದಲ್ಲಿನ ದತ್ತಾಂಶಗಳು ಕೂಡ ಅಂತರಾಷ್ಟ್ರೀಯ ಸಂಸ್ಥೆಯೇ ನೀಡಿರುವ ದತ್ತಾಂಶದಂತೆ ಬಿಂಬಿಸಲಾಗಿದ್ದು. ಹೀಗಾಗಿ ಇದು ಈ ದತ್ತಾಂಶವೇ ನಿಜವೆಂದು ನಂಬಿರುವವರು ಇದ್ದಾರೆ. ಹಾಗಾಗಿ ಈ ವೈರಲ್‌ ಸಂದೇಶದಲ್ಲಿ ಅಡಗಿರುವ ಸುಳ್ಳು ಮತ್ತು ಸತ್ಯ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ.

ಪೋಸ್ಟರ್‌ನ ಆರ್ಕೈವ್‌ ಲಿಂಕ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ
        ಪೋಸ್ಟರ್‌ನ ಆರ್ಕೈವ್‌ ಲಿಂಕ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಈ ಸಂದೇಶದ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್‌ ಸಂದೇಶದಲ್ಲಿನ ಕೆಲವೊಂದು ಕೀ ವರ್ಡ್ಸ್‌ಗಳ ಕುರಿತು ಪರಿಶೀಲನೆ ನಡೆಸಲಾಯಿತು. ಅದರಲ್ಲಿ ಪ್ರಮುಖವಾಗಿ ‘ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಡೆಮಾಗ್ರಾಫಿಕ್ಸ್ ರಿಸರ್ಚ್’ ಎಂಬ ಸಂಸ್ಥೆಯ ಹೆಸರನ್ನು ಉಲ್ಲೇಖಿಸಲಾಗಿತ್ತು. ಇದನ್ನೇ ಅಂತರ್ಜಾಲದಲ್ಲಿ ಹುಡುಕಾಟ ನಡೆಸಿದಾಗ ಆ ಹೆಸರಿನ ಅಂತರಾಷ್ಟ್ರೀಯ ಸಂಸ್ಥೆ ಇಲ್ಲ ಎಂಬುದು ತಿಳಿದುಬಂದಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಅಂತರ್ಜಾಲದಲ್ಲಿ ಭಾರತದ ಧರ್ಮಾಧಾರಿತ ಜನಸಂಖ್ಯಾ ಮಾದರಿಯ ಬಗ್ಗೆ ಮಾಹಿತಿಗಾಗಿ ಹುಡುಕಿದಾಗ, ‘ಪ್ಯೂ ಸಂಶೋಧನಾ ಕೇಂದ್ರ’ದ ಲೇಖನವು ಕಂಡುಬಂದಿದೆ. ಲೇಖನದಲ್ಲಿ , 2050 ರ ವೇಳೆಗೆ, ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು 18.4% ರಷ್ಟಿದ್ದಾರೆ ಎಂದು ಊಹಿಸಲಾಗಿದೆ. ‘ಪ್ಯೂ ರಿಸರ್ಚ್ ಸೆಂಟರ್’, ಅಮೆರಿಕಾದ ‘ಥಿಂಕ್ ಟ್ಯಾಂಕ್’ ಆಗಿದ್ದು, ಇದು ವಿಶ್ವದ ಜನಸಂಖ್ಯಾ ಪ್ರವೃತ್ತಿಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಇದೇ ರೀತಿ ತನ್ನ ವರದಿಯಲ್ಲಿ ಭಾರತದ ಜನಸಂಖ್ಯೆಯ ಬಗ್ಗೆ ಕೂಡ ಹಲವು ಮಾನದಂಡಗಳ ಆಧಾರದ ಮೇಲೆ ಸ್ಪಷ್ಟ ಮಾಹಿತಿಯನ್ನು ನೀಡಿದೆ.

ಇನ್ನು ವೈರಲ್‌ ಆಗಿರುವ ಪೋಸ್ಟ್‌ನಲ್ಲಿ ಅಲ್ಲದೆ, ಪೋಸ್ಟ್‌ನಲ್ಲಿ, 2011 ರಲ್ಲಿ ಭಾರತದಲ್ಲಿನ ಮುಸ್ಲಿಮರ ಜನಸಂಖ್ಯೆಯನ್ನು ಅಧಿಕೃತ ಮಾಹಿತಿಯ ಪ್ರಕಾರ ‘22.6%’ ಎಂದು ಉಲ್ಲೇಖಿಸಲಾಗಿದೆ. ಆದರೆ 2011 ರ ಜನಗಣತಿಯ ಪ್ರಕಾರ , ದೇಶದಲ್ಲಿ ಮುಸ್ಲಿಮರ ಜನಸಂಖ್ಯೆಯು ಕೇವಲ ‘14.2%’ ಆಗಿತ್ತು. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿರುವ ಸಂದೇಶ ಜನ ಸಾಮಾನ್ಯರನ್ನು ದಾರಿತಪ್ಪಿಸಲು ಸೃಷ್ಟಿಸಲಾಗಿದೆ ಎಂದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಸಂದೇಶದಲ್ಲಿ ಉಲ್ಲೇಖಿಸಿರುವಂತೆ 2041 ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು 84% ರಷ್ಟು ಇರಲಿದ್ದಾರೆ ಸುಳ್ಳಾಗಿದೆ. ಹಾಗೂ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಡೆಮಾಗ್ರಾಫಿಕ್ಸ್ ರಿಸರ್ಚ್ ಎಂಬ ಅಂತರಾಷ್ಟ್ರೀಯ ಸಂಸ್ಥೆ ಅಸ್ತಿತ್ವದಲ್ಲೇ ಇಲ್ಲ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check: ಸ್ವಿಸ್ ಬ್ಯಾಂಕುಗಳಲ್ಲಿ ಕಪ್ಪು ಹಣವನ್ನು ಹೊಂದಿರುವ ಭಾರತೀಯರ ಯಾವುದೇ ಪಟ್ಟಿಯನ್ನು ವಿಕಿಲೀಕ್ಸ್ ಪ್ರಕಟಿಸಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *