Fact Check | ಪಪ್ಪಾಯಿ ಎಲೆಯ ರಸವು ಡೆಂಗ್ಯು ಖಾಯಿಲೆ ಗುಣ ಪಡಿಸುತ್ತದೆ ಎಂಬುದು ಸುಳ್ಳು

“ತುರ್ತು ಮಾಹಿತಿ.. ಪಪ್ಪಾಯಿ ಎಲೆಯ ರಸವು ಜೇನು ತುಪ್ಪದೊಂದಿಗೆ ಪವಾಡದಂತೆ ಕೆಲಸ ಮಾಡುತ್ತದೆ. ಪ್ಲೆಟ್ಲೆಟ್‌ ಎಣಿಕೆ 12 ಗಂಟೆಗಳಲ್ಲಿ 68,000 ದಿಂದ 200000 ದವರೆಗೆ ಏರುತ್ತದೆ. ಮಾನವೀಯತೆಯ ಸೇವೆ ಮಾಡಲು ಈ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳಿ.. ಭಾರತದಾದ್ಯಂತ ಡೆಂಗ್ಯ ಜ್ವರ ವಿಪರೀತವಾಗಿ ಹರಡುತ್ತಿದೆ. ದಯವಿಟ್ಟು ಈ ವಿಷಯವನ್ನು ಹಂಚಿಕೊಳ್ಳುವ ಮೂಲಕ, ಹಲವಾರು ಜೀವಗಳನ್ನು ಉಳಿಸಿದ ಪುಣ್ಯ ನಿಮಗೆ ಸಿಗುತ್ತದೆ ” ಎಂಬ ಪೋಸ್ಟರ್‌ನೊಂದಿಗೆ ಸುದ್ದಿಯೊಂದು ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಪೋಸ್ಟರ್‌ ನೋಡಿದ ಹಲವರು ಇದು ಆರ್ಯುವೇದ ಔಷಧಿ ಪದ್ಧತಿ ಇರಬಹುದು ಎಂದು ಹಲವು ಮಂದಿಗೆ ವ್ಯಾಪಕವಾಗಿ ಶೇರ್‌ ಮಾಡುತ್ತಿದ್ದಾರೆ. ಇನ್ನು ಕೆಲವರು  ಆರೋಗ್ಯ ಇಲಾಖೆಯಿಂದಲೂ ಈ ಸಲಹೆ ಬಂದಿರಬಹುದು ಎಂದು ಭಾವಿಸಿ ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಿಗೆ ಕೂಡ ಹಂಚಿಕೊಳ್ಳುತ್ತಿದ್ದಾರೆ. ಆದರೆ ವಿವಿಧ ಕಾರಣಗಳಿಂದ ಈ ಪೋಸ್ಟ್‌ ಅನುಮಾನವನ್ನು ಹುಟ್ಟು ಹಾಕಿದೆ. ಹಾಗಾಗಿ ವೈರಲ್‌ ಪೋಸ್ಟ್‌ನ  ಸತ್ಯಾಸತ್ಯತೆಯನ್ನು ಈ ಅಂಕಣದಲ್ಲಿ ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಸುದ್ದಿಯ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಪೋಸ್ಟರ್‌ನಲ್ಲಿದ್ದ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು ಈ ವೇಳೆ 29 ಸೆಪ್ಟಂಬರ್‌ 2023 ರಂದು ಅನ್‌ಲೈನ್‌ ಸುದ್ದಿತಾಣ ಬೂಮ್‌ ಪ್ರಕಟಿಸಿದ Dragonfruit To Papaya Leaves: Common Dengue Myths Debunked ಎಂಬ ವರದಿಯೊಂದು ಕಂಡು ಬಂದಿದೆ.  ಈ ವರದಿಯಲ್ಲಿ ಡ್ರ್ಯಾಗನ್‌ಪ್ರೂಟ್‌, ಪಪ್ಪಾಯಿ ಎಲೆ, ಹೆಚ್ಚು ನೀರು ಕುಡಿಯುವುದರಿಂದ ಡೆಂಗ್ಯು ನಿವಾರಣೆ ಆಗುತ್ತದೆ ಎಂಬ ಸುಳ್ಳು ಸುದ್ದಿಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿತ್ತು. 

ಇನ್ನು ಪಪ್ಪಾಯಿ ಎಲೆಯ ಜ್ಯೂಸ್‌ನಿಂದ ಡೆಂಗ್ಯ ನಿವಾರಣೆಯಾಗುತ್ತದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ 28 ನವೆಂಬರ್ 2019 ರಂದು ದ ನ್ಯೂಸ್‌ ಮಿನಿಟ್‌ ಆನ್‌ಲೈನ್‌ ಸುದ್ದಿ ತಾಣ ಕೂಡ ವರದಿಯನ್ನು ಮಾಡಿದ್ದು, ಅದೇ ಸಮಯದಲ್ಲಿ ಡಾಕ್ಟರ್ಸ್ ಅಸೋಸಿಯೇಷನ್ ಫಾರ್ ಸೋಶಿಯಲ್ ಇಕ್ವಾಲಿಟಿ ಕಾರ್ಯದರ್ಶಿ ಡಾ.ಶಾಂತಿ ರವೀಂದ್ರನಾಥ್‌ ಅವರನ್ನು ಕೂಡ ಈ ಸಂಪರ್ಕಿಸಿ ಮಾತನಾಡಿತ್ತು.

ಡಾ.ಶಾಂತಿ ರವೀಂದ್ರನಾಥ್‌ ಅವರು, “ಡೆಂಗ್ಯೂ ರೋಗಕ್ಕೆ ವೈಜ್ಞಾನಿಕ ತಳಹದಿಯ ಆಧಾರಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಹೊಸ ಹೊಸ ಸಂಶೋಧನೆಗಳು ಸಹ ನಡೆಯುತ್ತಿರುತ್ತವೆ. ಆದರೆ ಪಪ್ಪಾಯಿ ಎಲೆಯ ರಸವು ಡೆಂಗ್ಯೂವನ್ನು ಗುಣಪಡಿಸುತ್ತದೆ ಎಂಬ ಸಮರ್ಥನೆಯನ್ನು ಬೆಂಬಲಿಸಲು ಯಾವುದೇ ವೈದ್ಯಕೀಯ ಆಧಾರವಿಲ್ಲ. ಸಿದ್ಧ ವೈದ್ಯರು ಕೂಡ ಡೆಂಗ್ಯೂಗೆ ಪಪ್ಪಾಯಿ ಎಲೆಯ ರಸವನ್ನು ಶಿಫಾರಸು ಮಾಡಿಲ್ಲ” ಎಂಬುದನ್ನು ಸ್ಪಷ್ಟ ಪಡಿಸಿದರು ಎಂದು ಉಲ್ಲೇಖಿಸಲಾಗಿದೆ.

ಇನ್ನು ಆರೋಗ್ಯ ಇಲಾಖೆಯಿಂದ ಯಾವುದಾದರು ಅಧಿಕೃತ ಪ್ರಕಟಣೆಗಳು ಅಥವಾ ಸಲಹೆ, ಸೂಚನೆಗಳು ಈ ಕುರಿತು ಬಂದಿವೆಯಾ ಎಂದು ಪರಿಶೀಲನೆ ನಡೆಸಿದಾಗ, ಇದಕ್ಕೆ ಪೂರಕವಾದ ಯಾವುದೇ ಮಾಹಿತಗಳು ಲಭ್ಯವಾಗಿಲ್ಲ. ಒಂದು ವೇಳೆ ಪಪ್ಪಾಯಿ ಎಲೆ ಸಂಪೂರ್ಣವಾಗಿ ಡೆಂಗ್ಯೂ ಖಾಯಿಲೆಯನ್ನು ನಿರ್ನಾಮ ಮಾಡುತ್ತದೆ ಎಂದರೆ ಈ ಕುರಿತು ಅಧಿಕತ ಸಲಹೆ ಸೂಚನೆಗಳಾದರೂ ಆರೋಗ್ಯ ಇಲಾಖೆಯಿಂದ ಬರುತ್ತಿದ್ದವು. ಹೀಗಾಗಿ ಇದೊಂದು ಊಹಾತ್ಮಕ ಕಲ್ಪನೆಯಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಡೆಂಗ್ಯೂ ನಿವಾರಣೆಯಾಗುತ್ತದೆ ಎಂಬುದು ಸುಳ್ಳು. ಇಂತಹ ಸುಳ್ಳು ಸುದ್ದಿಗಳನ್ನು ಶೇರ್‌ ಮಾಡುವುದು ಅಪರಾಧವಾಗಿದೆ. ಹಾಗಾಗಿ ವೈರಲ್‌ ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಒಮ್ಮೆ ಪರಿಶೀಲಿಸಿ…


ಇದನ್ನೂ ಓದಿ : Fact Check: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಮದುವೆಯ ಸ್ಟ್ರೀಮಿಂಗ್ ಹಕ್ಕನ್ನು Hotstar ಗೆದ್ದಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *