Fact Check | ಅನುರಾಗ್ ಠಾಕೂರ್ ಪ್ರಶ್ನೆಗೆ ಉತ್ತರಿಸಲು ರಾಹುಲ್ ಗಾಂಧಿ ವಿಫಲ ಎಂಬುದು ಎಡಿಟೆಡ್‌ ವಿಡಿಯೋವಾಗಿದೆ

ಸಾಮಾಜಿ ಜಾಲತಾಣದಲ್ಲಿ ” ಈ ವಿಡಿಯೋ ನೋಡಿ ಅನುರಾಗ್‌ ಠಾಕೂರ್‌ ಅವರು ವಿಪಕ್ಷಗಳಿಗೆ ಅದರಲ್ಲೂ ಪ್ರಮುಖವಾಗಿ ರಾಹುಲ್‌ ಗಾಂಧಿ ಅವರಿಗೆ ಮೊನಚಾದ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಯಲ್ಲಿ ಅವರು ” ನಾನು ನಿಮಗೆ ಒಂದು ವಿಷಯ ಕೇಳಲು ಬಯಸುತ್ತೇನೆ, ಸಂವಿಧಾನದಲ್ಲಿ ಎಷ್ಟು ಪುಟಗಳಿವೆ? ಈ ಹಲವು, ಈ ಹಲವು ಎಂದು ಹೇಳಬೇಡಿ, ಎಷ್ಟು ಪುಟಗಳಿವೆ ಎಂದು ಹೇಳಿ? ನೀವು ಅದನ್ನು (ಸಂವಿಧಾನದ ಪ್ರತಿ) ಪ್ರತಿದಿನ ಒಯ್ಯುತ್ತೀರಿ, ನೀವು ಎಂದಾದರೂ ಅದನ್ನು ತೆರೆದು ಓದುತ್ತೀರಾ? ನೀವು ಅದನ್ನು ಓದುವುದಿಲ್ಲ, ನೀವು ಅದನ್ನು ಬೀಸುತ್ತಲೇ ಇರುತ್ತೀರಿ. ಅದನ್ನು ನಿಮ್ಮ ಜೇಬಿನಿಂದ ಹೊರತೆಗೆಯಿರಿ.” ಎಂದು ಪ್ರಶ್ನಿಸಿದ್ದಾರೆ. ಆದರೆ ಈ ಪ್ರಶ್ನೆಗೆ ಉತ್ತರ ಕೊಡಲು ರಾಹುಲ್‌ ಗಾಂಧಿ ತಿಣುಕಾಡಿದ್ದಾರೆ” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇನ್ನು ಈ ವಿಡಿಯೋವನ್ನು ಸಾಕಷ್ಟು ಮಂದಿ ತಮ್ಮ ಸಾಮಾಜಿ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದು, ರಾಹುಲ್‌ ಗಾಂಧಿ ವಿರುದ್ಧ ಕಿಡಿ ಕಾರುತ್ತಿದ್ದಾರೆ.ಈ ವಿಡಿಯೋದಲ್ಲಿ ಕೂಡ ಅನುರಾಗ್‌ ಠಾಕೂರ್‌ ಅವರು ಸಂವಿಧಾನ ಗ್ರಂಥದ ಪುಟಗಳ ಬಗ್ಗೆ ಲೆಕ್ಕ ಕೇಳಿದಾಗ ಅದಕ್ಕೆ ಉತ್ತರ ಕೊಡದೆ ರಾಹುಲ್‌ ಗಾಂಧಿ ಅವರು ಕೆಲ ಸೆಕೆಂಡ್‌ಗಳ ಕಾಲ ಸುಮ್ಮನಿರುವುದನ್ನು ಕಾಣಬಹುದಾಗಿದೆ. ಬಳಿಕ ಅವರು ಅನುರಾಗ್‌ ಠಾಕೂರ್‌ ಅವರ ವಿರುದ್ಧ ಕಿಡಿ ಕಾರುವಂತೆ ವಿಡಿಯೋ ಕಂಡು ಬಂದಿದೆ. ಆದರೆ ಈ ವಿಡಿಯೋ ಹಲವು ಅನುಮಾನಗಳನ್ನು ಹುಟು ಹಾಕಿದ್ದು, ಈ ಫ್ಯಾಕ್ಟ್‌ಚೆಕ್‌ನಲ್ಲಿ ವೈರಲ್‌ ವಿಡಿಯೋದ ಅಸಲಿಯತ್ತು ಏನು ಎಂಬುದನ್ನು ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ ಹಲವು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ಸಂಸತ್ತಿನ ಅಧಿಕೃತ ಯುಟ್ಯುಬ್‌ ಚಾನಲ್‌ ಆದ ‘ಸಂಸದ್ ಟಿವಿ’ಯಲ್ಲಿ 01 ಜುಲೈ 2024 ರಂದು Anurag Thakur’s Remarks | Motion of Thanks on the President’s Address in 18th Lok Sabha ಎಂಬ ಶೀರ್ಷಿಕೆಯಡಿಯಲ್ಲಿ ಹಂಚಿಕೊಳ್ಳಲಾದ ಈ ವೈರಲ್ ಕ್ಲಿಪ್‌ನ ಪೂರ್ಣ ಆವೃತ್ತಿಯ ವೀಡಿಯೊಗೆ ಕಂಡು ಬಂದಿದೆ

ಈ ಸಂಪೂರ್ಣ ವೀಡಿಯೊವನ್ನು ಪರಿಶೀಲಿಸಿದಾಗ, ಅನುರಾಗ್ ಠಾಕೂರ್ ಅವರ ವೈರಲ್ ಕ್ಲಿಪ್ 56:36 ಟೈಮ್‌ಸ್ಟ್ಯಾಂಪ್‌ನಲ್ಲಿ ಪ್ರಾರಂಭವಾಗಿರುವುದು ಕಂಡು ಬಂದಿದೆ. ಟೈಮ್‌ಸ್ಟ್ಯಾಂಪ್ 56:33 ನಲ್ಲಿ, ಅನುರಾಗ್ ಠಾಕೂರ್ ಅವರು ವಿರೋಧ ಪಕ್ಷದ ಸಂಸದರನ್ನು ಗುರಿಯಾಗಿಸಿಕೊಂಡು , “ನಾನು ನಿಮಗೆ ಒಂದು ವಿಷಯ ಕೇಳಲು ಬಯಸುತ್ತೇನೆ, ಸಂವಿಧಾನದಲ್ಲಿ ಎಷ್ಟು ಪುಟಗಳಿವೆ? ಈ ಹಲವು,  ಹಲವು.. ಎಂದು ಹೇಳಬೇಡಿ, ಎಷ್ಟು ಪುಟಗಳಿವೆ ಎಂದು ಹೇಳಿ? ನೀವು ಅದನ್ನು (ಸಂವಿಧಾನದ ಪ್ರತಿ) ಪ್ರತಿದಿನ ಒಯ್ಯುತ್ತೀರಿ, ನೀವು ಎಂದಾದರೂ ಅದನ್ನು ತೆರೆದು ಓದುತ್ತೀರಾ? ನೀವು ಅದನ್ನು ಓದುವುದಿಲ್ಲ, ನೀವು ನಿಮ್ಮ ಜೇಬಿನಿಂದ ತೆಗೆದುಕೋಂಡು ಸಂವಿಧಾನ ಗ್ರಂಥವನ್ನು ಪ್ರದರ್ಶಿಸುತ್ತೀರಿ ಅಷ್ಟೇ. ” ಎಂದು ಅನುರಾಗ್‌ ಠಾಕೂರ್‌ ಅವರು ವಿರೋಧ ಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುವುದು ಕಾಣ ಬಹುದಾಗಿದೆ.

56:36 ಟೈಮ್‌ಸ್ಟ್ಯಾಂಪ್‌ನಲ್ಲಿ ಪ್ರಾರಂಭವಾಗಿರುವ ಅನುರಾಗ್‌ ಠಾಕೂರ್‌ ಅವರ ಭಾಷಣವನ್ನು ಈ ಕೆಳಗಿನ ವಿಡಿಯೋದಲ್ಲಿ ವೀಕ್ಷಿಸಬಹುದಾಗಿದೆ 

ಅನುರಾಗ್ ಠಾಕೂರ್ ಈ ಟೀಕೆಗಳನ್ನು ಮಾಡಿದಾಗ, ಕ್ಯಾಮೆರಾ ವಿರೋಧ ಪಕ್ಷದ ಬೆಂಚುಗಳತ್ತ ಚಲಿಸಿದೆ, ಆದರೆ ದೃಶ್ಯಗಳಲ್ಲಿ ರಾಹುಲ್ ಗಾಂಧಿ ಎಲ್ಲಿಯೂ ಕಾಣಿಸಲಿಲ್ಲ. ಠಾಕೂರ್ ಅವರ ಸಂಪೂರ್ಣ ಭಾಷಣದ ಸಮಯದಲ್ಲಿ ಕ್ಯಾಮೆರಾ ಯಾವುದೇ ಸಮಯದಲ್ಲಿ ರಾಹುಲ್‌ ಗಾಂಧಿಯ ಅವರ ಮೇಲೆ ಕೇಂದ್ರೀಕರಿಸಲಿಲ್ಲ, ಈ ವಿಡಿಯೋ ವೈರಲ್ ವೀಡಿಯೊಗೆ ವಿರುದ್ಧವಾಗಿರುವುದು ಖಚಿತವಾಗಿತ್ತು.

ಸಾಮಾನ್ಯವಾಗಿ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರು ವಿರೋಧ ಪಕ್ಷದ ಸಂಸದರಿಗೆ ನಿಗದಿಪಡಿಸಿದ ಮೊದಲ ಸಾಲಿನ ಬೆಂಚ್‌ಗಳಲ್ಲಿ ಕುಳಿತುಕೊಳ್ಳುತ್ತಾರೆ. ರಾಹುಲ್ ಗಾಂಧಿ ಅವರು 18ನೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ, ಆದ್ದರಿಂದ ಅವರು ಸಾಮಾನ್ಯವಾಗಿ ಮುಂದಿನ ಸಾಲಿನಲ್ಲಿ ಆಸನವನ್ನು ಕುಳಿತುಕೊಳ್ಳುತ್ತಾರೆ. ಇಡೀ ವಿಡಿಯೋವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಅನುರಾಗ್ ಠಾಕೂರ್ ಅವರ ಭಾಷಣದುದ್ದಕ್ಕೂ ರಾಹುಲ್ ಗಾಂಧಿ ಅವರ ಮುಂದಿನ ಸಾಲಿನ ಆಸನ ಖಾಲಿ ಉಳಿದಿರುವುದು ಸ್ಪಷ್ಟವಾಗಿದೆ.

ವಿಪಕ್ಷ ನಾಯಕನಿಗೆ ನಿಗಧಿಪಡಿಸಿರುವ ಆಸನದಲ್ಲಿ ರಾಹುಲ್‌ ಗಾಂಧಿ ಅವರು ಇಲ್ಲದಿರುವುದು
ವಿಪಕ್ಷ ನಾಯಕನಿಗೆ ನಿಗಧಿಪಡಿಸಿರುವ ಆಸನದಲ್ಲಿ ರಾಹುಲ್‌ ಗಾಂಧಿ ಅವರು ಇಲ್ಲದಿರುವುದು

ಇನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆದ ವೀಡಿಯೊದಲ್ಲಿ ಬಳಸಲಾದ ರಾಹುಲ್ ಗಾಂಧಿಯವರ ಕ್ಲಿಪ್ ಅನ್ನು 01 ಜುಲೈ 2024 ರಂದು ರಾಷ್ಟ್ರಪತಿಗಳ ಭಾಷಣಕ್ಕೆ ನೀಡಿದ ಪ್ರತಿಕ್ರಿಯೆಯಿಂದ ತೆಗೆದುಕೊಳ್ಳಲಾಗಿದೆ ಎಂಬುದು ಕೆಲವೊಂದು ಕೀ ಫ್ರೇಮ್‌ಗಳ ಹೋಲಿಕೆಯಿಂದ ಖಚಿತವಾಗಿದೆ. ಹೀಗಾಗಿ ರಾಹುಲ್‌ ಗಾಂಧಿ ಅವರು ಇಲ್ಲದ ವೇಳೆ ಅನುರಾಗ್‌ ಠಾಕೂರ್‌ ಅವರು ಮಾಡಿದ ಭಾಷಣ ಮತ್ತು ರಾಹುಲ್‌ ಗಾಂಧಿ ಅವರು ವಿಪಕ್ಷ ನಾಯಕನಾಗಿ ಆಯ್ಕೆಯಾದ ನಂತರ ಮಾಡಿದ ಮೊದಲ ಭಾಷಣದ ವಿಡಿಯೋ ಕ್ಲಿಪ್‌ಗಳನ್ನು ಕಟ್‌ ಮಾಡಿ ಎಡಿಟ್‌ ಮಾಡುವ ಮೂಲಕ ಸುಳ್ಳು ಸುದ್ದಿಯನ್ನು ಹಂಚಿಕೊಂಡಿರುವುದು ಸಾಬೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಅನುರಾಗ್ ಠಾಕೂರ್ ಸಂವಿಧಾನದ ಪ್ರಶ್ನೆ ಕೇಳುವ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಉಪಸ್ಥಿತರಿರಲಿಲ್ಲ. ಹಾಗಾಗಿ ಅವರಿಗೆ ಮುಖಭಂಗವಾಯಿತು ಎಂಬುದು ಸುಳ್ಳು. ಆದರೆ ರಾಹುಲ್ ಗಾಂಧಿ ವಿರೋಧಿಗಳು ಅವರ ಹಳೆಯ ವಿಡಿಯೋದ ತುಣುಕುಗಳನ್ನು ಜೋಡಿಸಿ ಎಡಿಟ್ ಮಾಡುವ ಮೂಲಕ ಅವರಿಗೆ ಅವಮಾನ ಆಗುವ ರೀತಿಯಲ್ಲಿ ಹಂಚಿಕೊಳ್ಳುತ್ತಿದ್ದಾರೆ ಅಷ್ಟೇ.


ಇದನ್ನೂ ಓದಿ : ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಕುಟುಂಬ ಸಮೇತ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *