ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಕುಟುಂಬ ಸಮೇತ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬುದು ಸುಳ್ಳು

ಮೊಹಮ್ಮದ್ ಅಜರುದ್ದೀನ್

“ಮೊಹಮ್ಮದ್ ಅಜರುದ್ದೀನ್ ತನ್ನ ಪತ್ನಿ ಮತ್ತು ಮಗನೊಂದಿಗೆ ಕಾಶಿಯಲ್ಲಿ ಮುಸ್ಲಿಂ ಧರ್ಮವನ್ನು ತೊರೆದು ಸನಾತನ ಹಿಂದೂ ಧರ್ಮವನ್ನು ಸ್ವೀಕರಿಸಿದರು. ವಾರಣಾಸಿಯ ಭೋಜ್‌ಬೀರ್‌ನಲ್ಲಿರುವ ಆರ್ಯ ಸಮಾಜ ಮಂದಿರದಲ್ಲಿ ಮೊಹಮ್ಮದ್ ಅಜರುದ್ದೀನ್ ತನ್ನ ಪತ್ನಿ ಮತ್ತು ಪುತ್ರನೊಂದಿಗೆ ಇಸ್ಲಾಂ ಧರ್ಮವನ್ನು ತೊರೆದು ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ” ಎಂಬ ಸಂದೇಶವೊಂದು ವಾಟ್ಸಾಪ್‌ ಮತ್ತು ಥ್ರೆಡ್‌ನಲ್ಲಿ ಹರಿದಾಡುತ್ತಿದೆ. ಈ ಸಂದೇಶದೊಂದಿಗೆ ದಂಪತಿಯೊಂದು ದೇವಾಸ್ಥಾನದಲ್ಲಿ ಪೂಜೆ ಸಲ್ಲಿಸುವ ಮತ್ತು ಅದಕ್ಕೆ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಫೋಟೊವನ್ನು ಕೊಲಾಜ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್ ಚೆಕ್

ಹೆಸರಾಂತ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಒಂದು ವೇಳೆ ಮುಸ್ಲಿಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದರೆ ಅದನ್ನು ಮುಖ್ಯವಾಹಿನಿ ಮಾಧ್ಯಮಗಳು ದೊಡ್ಡ ಸುದ್ದಿ ಮಾಡುತ್ತಿದ್ದವು. ಆದರೆ ಈ ಕುರಿತು ಹುಡುಕಿದಾಗ ಆ ರೀತಿಯ ಯಾವುದೇ ವರದಿಗಳು ಲಭ್ಯವಾಗಿಲ್ಲ.

ಇನ್ನು ಮೊಹಮ್ಮದ್ ಅಜರುದ್ದೀನ್ ಎಂಬ ಕೀ ವರ್ಡ್ ಬಳಸಿ ಮತ್ತಷ್ಟು ಹುಡುಕಿದಾಗ ಹಿಂದಿ ಸುದ್ದಿ ವಾಹಿನಿ ಎಬಿಪಿ ಲೈವ್‌ನ ವೆಬ್‌ಸೈಟ್‌ನಲ್ಲಿ ಜುಲೈ 1 ರಂದು “ಯುಪಿ ನ್ಯೂಸ್: ‘ಮೊಹಮ್ಮದ್ ಅಜರುದ್ದೀನ್’ ಕಾಶಿಯಲ್ಲಿ ತನ್ನ ಹೆಂಡತಿ ಮತ್ತು ಮಗನೊಂದಿಗೆ ಮುಸ್ಲಿಂ ಧರ್ಮವನ್ನು ತೊರೆದರು, ಈ ಕಾರಣವನ್ನು ಹೇಳಿದರು” ಎಂಬ ಸುದ್ದಿ ಪ್ರಕಟವಾಗಿದೆ. ಅದನ್ನು ತೆರೆದು ನೋಡಿದಾಗ ಮುಸ್ಲಿಂ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮತಾಂತರವಾಗಿರುವುದು ಚಂದೌಲಿಯ ಸ್ಥಳೀಯ ನಿವಾಸಿ ಮೊಹಮ್ಮದ್ ಅಜರುದ್ದೀನ್ ಎಂದು ಬರೆಯಲಾಗಿದೆ. ಆ ವರದಿಯಲ್ಲಿಯೂ ಎಲ್ಲಿಯೂ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಎಂದು ಉಲ್ಲೇಖಿಸಿಲ್ಲ.

ಅಮರ್ ಉಜಾಲಾ ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಸಹ “ಚಂದೌಲಿಯ ಸದರ್ ಕೊತ್ವಾಲಿ ಪ್ರದೇಶದ ಬಿಚಿಯಾ ಗ್ರಾಮದ ನಿವಾಸಿ ಮೊಹಮ್ಮದ್ ಅಜರುದ್ದೀನ್ ತನ್ನ ಕುಟುಂಬ ಸಮೇತ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದು ತನ್ನ ಹೆಸರನ್ನು ಡಬ್ಲ್ಯೂ ಸಿಂಗ್ ಎಂದು ಬದಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಅದರಲ್ಲಿಯೂ ಸಹ ಮಾಜಿ ಕ್ರಿಕೆಟಿಗ ಎಂದು ಉಲ್ಲೇಖಿಸಿಲ್ಲ. ಅದರಲ್ಲಿನ ಫೋಟೊ ಸ್ಪಷ್ಟವಾಗಿದ್ದು, ಅಲ್ಲಿರುವ ಫೋಟೊ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್‌ರವರದ್ದಲ್ಲ ಎಂಬುದು ಸ್ಪಷ್ಟವಾಗಿದೆ.

ಅಮರ್ ಉಜಲಾ ವರದಿ

ಈ ಎಲ್ಲಾ ಕಾರಣಗಳಿಂದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಕುಟುಂಬ ಸಮೇತ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂಬುದು ಸುಳ್ಳು ಸುದ್ದಿಯಾಗಿದೆ. ಕಿಡಿಗೇಡಿಗಳು ಈ ರೀತಿಯ ಎಡಿಟ್ ಫೋಟೊ ಹಂಚಿಕೊಂಡು ದಿಕ್ಕುತಪ್ಪಿಸುತ್ತಿದ್ದಾರೆ ಅಷ್ಟೇ.


ಇದನ್ನೂ ಓದಿ: Fact Check: ಸಂಸತ್ತಿನಲ್ಲಿ ಪ್ರಧಾನಿ ಮೋದಿಯವರ ಕುರಿತು ರಾಹುಲ್ ಗಾಂಧಿ ಅವಹೇಳನಕಾರಿ ಬೈಗುಳವನ್ನು ಪ್ರಯೋಗಿಸಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *