Fact Check | ಅಗ್ನಿವೀರ್‌ ಪರಿಹಾರ ಧನ : ರಾಹುಲ್‌ ಗಾಂಧಿ, ರಾಜನಾಥ್‌ ಸಿಂಗ್ ಹೇಳಿಕೆಗಳಲ್ಲಿ ಸುಳ್ಳೆಷ್ಟು? ಸತ್ಯವೆಷ್ಟು?

ಜುಲೈ 1 ರಂದು ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಸಂದರ್ಭದಲ್ಲಿ, ರಾಯ್ ಬರೇಲಿಯ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯನ್ನು ಟೀಕಿಸಿದರು , ಸರ್ಕಾರವು ಪಿಂಚಣಿ ಅಥವಾ ಹುತಾತ್ಮರ ಸ್ಥಾನಮಾನವನ್ನು ನೀಡಿಲ್ಲ ಎಂದು ಹೇಳಿದರು. ಇದನ್ನೇ ನಿಜವೆಂದು ಭಾವಿಸಿದ ಕಾಂಗ್ರೆಸ್‌ ಬೆಂಬಲಿಗರು ಹಾಗೂ ಹಲವು ಕಾರ್ಯಕರ್ತರು ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮತ್ತೊಂದೆಡೆ ಇದೇ ರಾಹುಲ್‌ ಗಾಂಧಿ ಅವರ ಭಾಷಣದ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು “ಈ ಯೋಜನೆಯ ಬಗ್ಗೆ ರಾಹುಲ್‌ ಗಾಂಧಿ ತಪ್ಪು ಮಾಹಿತಿ ನೀಡಿದ್ದಾರೆ. ಹುತಾತ್ಮರಾದ ಮೇಲೆ ಅಗ್ನಿವೀರರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಲಾಗುತ್ತದೆ” ಎಂದು ಹೇಳಿಕೊಂಡಿದ್ದರು. ಇದನ್ನು ಹಲವು ಮಾಧ್ಯಮಗಳು ಕೂಡ ವರದಿ ಮಾಡಿದ್ದವು 

ಭಾಷಣದಲ್ಲಿ ರಾಹುಲ್ ಗಾಂಧಿ ಹೇಳಿದ್ದೇನು?

“ಕೆಲವು ದಿನಗಳ ಹಿಂದೆ ನಾನು ಪಂಜಾಬ್‌ನಲ್ಲಿ ಅಗ್ನಿವೀರನ ಕುಟುಂಬವನ್ನು ಭೇಟಿಯಾದೆ. ಒಂದು ಸಣ್ಣ ಮನೆ ಇತ್ತು. ನೆಲಬಾಂಬ್ ಮನೆಯಲ್ಲಿ ಅಗ್ನಿವೀರ್ ಯೋಧ  ಹುತಾತ್ಮನಾದ. ನಾನು ಅವನನ್ನು ಹುತಾತ್ಮ ಎಂದು ಕರೆಯುತ್ತಿದ್ದೇನೆ, ಆದರೆ ಭಾರತ ಸರ್ಕಾರ ಹಾಗೆ ಕರೆಯುವುದಿಲ್ಲ. ನರೇಂದ್ರ ಮೋದಿ ಹಾಗೆ ಕರೆಯುವುದಿಲ್ಲ. ನರೇಂದ್ರ ಮೋದಿ ಅವರನ್ನು ಅಗ್ನಿವೀರ್ ಎಂದು ಕರೆಯುತ್ತಾರೆ. ಸಾಮಾನ್ಯ ಸೈನಿಕನು ಪಿಂಚಣಿ ಪಡೆಯುತ್ತಾನೆ ಆದರೆ ಈ ಸೈನಿಕ  ಖಂಡಿತವಾಗಿಯೂ ದುಃಖ ಪಡುತ್ತಾನೆ,  ಭಾರತ ಸರ್ಕಾರವು ಸಾಮಾನ್ಯ ಸೈನಿಕನಿಗೆ ಸಹಾಯ ಮಾಡುತ್ತದೆ, ಆದರೆ ಅಗ್ನಿವೀರ್‌ ಸೈನಿಕರು ‘ಉಪಯೋಗಿಸು ಮತ್ತು ಎಸೆಯುವ’ ಕಾರ್ಮಿಕರಂತೆ ಈ ಸರ್ಕಾರ ನೋಡುತ್ತಿದೆ.” ಎಂಬ ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ.

ರಾಹುಲ್‌ ಗಾಂಧಿ ಅವರ ಪೂರ್ಣ ಭಾಷಣವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ

ಇದಕ್ಕೆ ರಾಜನಾಥ್‌ ಸಿಂಗ್‌ ಅವರು ನೀಡಿದ ಪ್ರತಿಕ್ರಿಯೆ ಏನು?

”ಸಭಾಪತಿ ಸಾರ್, ಸುಳ್ಳು ಹೇಳಿಕೆ ನೀಡಿ ಸದನದ ದಿಕ್ಕು ತಪ್ಪಿಸಬೇಡಿ ಎಂದು ವಿರೋಧ ಪಕ್ಷದ ನಾಯಕರಲ್ಲಿ ಕೇಳಿಕೊಳ್ಳುತ್ತೇನೆ, ಅಗ್ನಿವೀರ ಯೋಜನೆಯಡಿ ಯಾರಾದರೂ ಹುತಾತ್ಮರಾದರೆ ಅವರ ಕುಟುಂಬಕ್ಕೆ ಒಂದು ಕೋಟಿ ರೂ. ಪರಿಹಾರವನ್ನು ನೀಡಲಾಗುತ್ತದೆ. ಸಂಸತ್ತನ್ನು ದಾರಿ ತಪ್ಪಿಸುವ ಉದ್ದೇಶದಿಂದ ತಪ್ಪು ಮಾಹಿತಿ ನೀಡಬಾರದು.” ಎಂದು ಹೇಳಿಕೆಯನ್ನು ನೀಡಿದ್ದನು ನೋಡಬಹುದಾಗಿದೆ.

ಇನ್ನು ಇದರ ನಡುವೆ ಕೆಲವು ಮಾಧ್ಯಮಗಳು ರಾಹುಲ್‌ ಗಾಂಧಿ ಅವರ ಸುಳ್ಳು ಬಟಾ ಬಯಲಾಗಿದೆ ಎಂದು ವರದಿಯನ್ನು ಕೂಡ ಮಾಡುತ್ತಿವೆ. ಹೀಗಾಗಿ ಇಲ್ಲಿ ಯಾವು ನಿಜ ಮತ್ತು ಯಾವುದು ಸುಳ್ಳು ಎಂಬ ಗೊಂದಲ ಜನ ಸಾಮಾನ್ಯರಲ್ಲಿ ಮೂಡುತ್ತಿದೆ. ಹಾಗಾಗಿ ಈ ಫ್ಯಾಕ್ಟ್‌ಚೆಕ್‌ನಲ್ಲಿ ರಾಹುಲ್‌ ಗಾಂಧಿ ಅವರ ಹೇಳಿಕೆ ನಿಜವೋ ಅಥವಾ ರಾಜನಾಥ್‌ ಸಿಂಗ್‌ ಅವರ ಹೇಳಿಕೆ ನಿಜವೋ ಎಂಬುದನ್ನು ಪರಿಶೀಲನೆ ನಡೆಸೋಣ

ರಾಜನಾಥ್‌ ಸಿಂಗ್‌ ಅವರ ಪ್ರತಿಕ್ರಿಯೆಯನ್ನು 48:29 ನಿಮಿಷದ ಟೈಮ್‌ ಸ್ಟ್ಯಾಂಪ್‌ನಲ್ಲಿ ನೋಡಬಹುದಾಗಿದೆ

ಫ್ಯಾಕ್ಟ್‌ಚೆಕ್‌

ವ್ಯಾಪಕವಾಗಿ ಗೊಂದಲ ಉಂಟು ಮಾಡಿರುವ ಈ ವಿಚಾರದ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಹುಡುಕಾಟ ನಡೆಸಿದಾಗ 2015ರಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು PIB ಯಲ್ಲಿನ ಮಾಹಿತಿ ಲಭ್ಯವಾಗಿದೆ. ಅದರಲ್ಲಿ ಭಾರತೀಯ ಸೇನೆಯ ಯಾವುದೇ ಯೋಧ ಮತ್ತು ಭದ್ರತಾ ಸಿಬ್ಬಂದಿಗೆ ಹುತಾತ್ಮ ಎಂಬ ಪದವನ್ನು ಬಳಸಬಾರದು ಎಂಬ ಉಲ್ಲೇಖವಿರುವುದು ಕಂಡು ಬಂದಿದೆ.

ಇನ್ನು ಅಗ್ನಿಪಥ ಯೋಜನೆಯ ನಿಯಮವಳಿಗಳನ್ನು ಗಮನಿಸಿದಾಗ ನಾಲ್ಕು ವರ್ಷಗಳ ಸೇವೆ ಪೂರ್ಣಗೊಂಡ ನಂತರ, ಮಾಜಿ ಸೈನಿಕರಿಗೆ ಲಭ್ಯವಿರುವ ಗ್ರಾಚ್ಯುಟಿ, ಆರೋಗ್ಯ ಯೋಜನೆಗಳು, ಕ್ಯಾಂಟೀನ್‌ಗಳು ಮತ್ತು ಇತರ ಯಾವುದೇ ಸೌಲಭ್ಯವನ್ನು ಅಗ್ನಿವೀರರಿಗೆ ಲಭ್ಯವಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿರುವುದು ಕಂಡು ಬಂದಿದೆ.

ಇದರ ಜೊತೆಗೆ ರಾಹುಲ್‌ ಗಾಂಧಿ ಅವರು ಪಂಜಾಬ್‌ನ ಅಗ್ನಿವೀರ್‌ ಯೋಧನ ಬಗ್ಗೆ ಮಾಹಿತಿ ನೀಡಿದ್ದರು. ಈ ಕುರಿತು ಪರಿಶೀಲನೆ ನಡೆಸಿದಾಗ, ಅಕ್ಟೋಬರ್ 2023 ರಲ್ಲಿ, ಪಂಜಾಬ್ ನಿವಾಸಿ ಅಗ್ನಿವೀರ್ ಅಮೃತಪಾಲ್ ಸಿಂಗ್ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ, ಅವರಿಗೆ ಗಾರ್ಡ್ ಆಫ್ ಆನರ್ ನೀಡಲಿಲ್ಲ, ಇದು ಪ್ರತಿಪಕ್ಷಗಳನ್ನು ಪ್ರಶ್ನೆಗಳನ್ನು ಎತ್ತುವಂತೆ ಪ್ರೇರೇಪಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನೂ ಕೆಲವರು ಮೃತ ಸಿಂಗ್ ಅವರ ಪಾರ್ಥಿವ ಶರೀರವನ್ನು ಖಾಸಗಿ ವಾಹನದಲ್ಲಿ ಅವರ ಮನೆಗೆ ಕೊಂಡೊಯ್ಯಲಾಯಿತು. ಎಂದು ತಿಳಿಸಿದ್ದಾರೆ. 

ಆದರೆ ಈ ವಿಷಯ ವಿವಾದಕ್ಕೆ ತಿರುಗಿದ ನಂತರ, ಭಾರತೀಯ ಸೇನೆಯ White Knight Corps ತನ್ನ ಅಧಿಕೃತ ಎಕ್ಸ್‌ ಹ್ಯಾಂಡಲ್‌ನಿಂದ ಪೋಸ್ಟ್‌ ಕೂಡ ಮಾಡಿತ್ತು ಅದರಲ್ಲಿ “ದುರದೃಷ್ಟಕರ ಘಟನೆಯಲ್ಲಿ, ಅಗ್ನಿವೀರ್ ಅಮೃತಪಾಲ್ ಸಿಂಗ್ ರಜೌರಿ ಸೆಕ್ಟರ್‌ನಲ್ಲಿ ಸೆಂಟ್ರಿ ಡ್ಯೂಟಿಯಲ್ಲಿದ್ದಾಗ ಸ್ವಯಂ ಪ್ರೇರಿತ ಬಂದೂಕಿನ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದರು. ಹೆಚ್ಚಿನ ವಿವರಗಳನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯದ ವಿಚಾರಣೆ ಪ್ರಗತಿಯಲ್ಲಿದೆ. ಮೃತರ ಪಾರ್ಥಿವ ಶರೀರವನ್ನು, ಒಬ್ಬ ಜೂನಿಯರ್ ಕಮಿಷನ್ಡ್ ಆಫೀಸರ್ ಮತ್ತು ನಾಲ್ವರು ಇತರ ರ್ಯಾಂಕ್‌ಗಳೊಂದಿಗೆ, ಅಗ್ನಿವೀರ್‌ನ ಘಟಕವು ನೇಮಿಸಿದ ಸಿವಿಲ್ ಆಂಬ್ಯುಲೆನ್ಸ್‌ನಲ್ಲಿ ಸಾಗಿಸಲಾಯಿತು. ಜೊತೆಗಿದ್ದ ಸೇನಾ ಸಿಬ್ಬಂದಿ ಕೂಡ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.ಸಾವಿಗೆ ಕಾರಣವು ಸ್ವಯಂ ಉಂಟಾದ ಗಾಯವಾಗಿದೆ, ಹೀಗಾಗಿ ಅಸ್ತಿತ್ವದಲ್ಲಿರುವ ನೀತಿಗೆ ಅನುಗುಣವಾಗಿ ಯಾವುದೇ ಗೌರವ ಅಥವಾ ಮಿಲಿಟರಿ ಅಂತ್ಯಕ್ರಿಯೆಯನ್ನು ಒದಗಿಸಲು ಸಾಧ್ಯವಾಗಿಲ್ಲ.” ಎಂದು ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.

ಇನ್ನು ಇಲ್ಲಿ ರಾಹುಲ್‌ ಗಾಂಧಿ ಅವರ ಮಾತು ಸತ್ಯವಾಗಿದೆ. ಭಾರತೀಯ ಸೇನೆಯ ವೆಬ್‌ಸೈಟ್‌ನಲ್ಲಿ ಅಗ್ನಿವೀರ್‌ ಸೈನಿಕರ ಮರಣದ ನಂತರ, ಭಾರತೀಯ ಸೇನೆಯ ನಿಯಮಗಳ ಅಡಿಯಲ್ಲಿ ಒದಗಿಸಲಾದ ಪಿಂಚಣಿ ಸೌಲಭ್ಯಗಳನ್ನು ಅಗ್ನಿವೀರ್ ಪಡೆಯುವುದಿಲ್ಲ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಹಾಗಾಗಿ ಆ ಕುಟುಂಬಕ್ಕೆ ಪಿಂಚಣಿ ಸಿಕ್ಕಿಲ್ಲ ಎಂಬ ರಾಹುಲ್‌ ಗಾಂಧಿ ಅವರ ಹೇಳಿಕೆ ಸರಿಯಾಗಿದೆ. ಆದರೆ ಅಗ್ನಿವೀರ ಸೈನಿಕರಿ ಪರಿಹಾರವೇ ಸಿಗುವುದಿಲ್ಲ ಎಂಬ ಹೇಳಿಕೆ ತಪ್ಪಾಗಿದೆ.

ಏಕೆಂದರೆ ನಿಯಮಗಳ ಪ್ರಕಾರ, ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ ಅಗ್ನಿವೀರ್ ಯೋಧನಿಗೆ 48 ಲಕ್ಷ ರೂಪಾಯಿ ವಿಮಾ ರಕ್ಷಣೆ ಹಣ ಮತ್ತು 44 ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆ. ಇದಲ್ಲದೇ ಜವಾನನ ಉಳಿದ ಸೇವಾವಧಿಯ ಒಟ್ಟು ನಾಲ್ಕು ವರ್ಷಗಳ ವೇತನವನ್ನು ಕುಟುಂಬವೂ ಪಡೆಯುತ್ತದೆ. ಸರ್ಕಾರ ನೀಡಿದ ಕೊಡುಗೆ ಮತ್ತು ಅಲ್ಲಿಯವರೆಗೆ ಪಡೆದ ಮೊತ್ತದ ಬಡ್ಡಿಯನ್ನು ಸೈನಿಕರ ‘ಸೇವಾ ನಿಧಿ ನಿಧಿ’ಗೆ ಠೇವಣಿ ಮಾಡಲಾಗುತ್ತದೆ

ಅಗ್ನಿವೀರರು ಸೇವೆಯಲ್ಲಿದ್ದು ಕರ್ತವ್ಯದ ವೇಳೆ ಸಾವನ್ನಪ್ಪದಿದ್ದರೆ 48 ಲಕ್ಷ ರೂ.ಗಳ ವಿಮಾ ರಕ್ಷಣೆ ಮತ್ತು ಸೇವಾ ನಿಧಿಗೆ ಸರ್ಕಾರದ ಕೊಡುಗೆಯನ್ನು ಬಡ್ಡಿಯೊಂದಿಗೆ ಯೋಧನ ಕುಟುಂಬಕ್ಕೆ ನೀಡಲಾಗುತ್ತದೆ.ಆದರೆ, ಕರ್ತವ್ಯದಲ್ಲಿರುವಾಗ ಅಂಗವಿಕಲನಾಗುವ ಅಗ್ನಿವೀರ್‌ಗೆ ಅಂಗವಿಕಲತೆಯ ಶೇಕಡಾವಾರು ಪ್ರಕಾರ ಪರಿಹಾರವನ್ನು ನೀಡಲಾಗುತ್ತದೆ, ಅದು 15 ಲಕ್ಷದಿಂದ 45 ಲಕ್ಷದವರೆಗೆ ಇರುತ್ತದೆ. ಇದರೊಂದಿಗೆ, ಅಂಗವಿಕಲ ಅಗ್ನಿವೀರ್ ಸೇವಾ ನಿಧಿಯಲ್ಲಿ ಠೇವಣಿ ಮಾಡಿದ ಮೊತ್ತ, ಅದರ ಬಡ್ಡಿ ಮತ್ತು ಅದಕ್ಕೆ ಸರ್ಕಾರದ ಕೊಡುಗೆಯನ್ನು ಪಡೆಯುತ್ತಾನೆ. ಉಳಿದ ಸೇವಾವಧಿಯ ಸಂಪೂರ್ಣ ವೇತನವನ್ನೂ ಪಡೆಯುತ್ತಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಅಗ್ನಿವೀರನ ಮರಣ ಅಥವಾ ಅಂಗವೈಕಲ್ಯದ ಸಂದರ್ಭದಲ್ಲಿ ನೀಡಲಾಗುವ ಪರಿಹಾರವು ವಿಭಿನ್ನ ಸಂದರ್ಭಗಳಲ್ಲಿ ವಿಭಿನ್ನವಾಗಿರುತ್ತದೆ ಎಂಬುದು ಸ್ಪಷ್ಟವಾಗಿದೆ. ರಾಜನಾಥ್ ಸಿಂಗ್ ಹೇಳಿಕೊಂಡಂತೆ ಪ್ರತಿಯೊಬ್ಬ ಹುತಾತ್ಮ ಅಗ್ನಿವೀರ್‌ಗೆ ಒಂದು ಕೋಟಿ ರೂಪಾಯಿ ಸಿಗುತ್ತದೆ ಎಂಬುದು ಸುಳ್ಳು. ಅಗ್ನಿವೀರ್ ಗೆ ಯಾವುದೇ ಪರಿಹಾರ ಸಿಗುತ್ತಿಲ್ಲ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯೂ ಸಂಪೂರ್ಣ ಸತ್ಯವಲ್ಲ ಎಂಬುದು ಸಾಭೀತಾಗಿದೆ.


ಇದನ್ನೂ ಓದಿ: Fact Check: ಕಂಗಾನ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಕುಲ್ವಿಂದರ್ ಕೌರ್ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *