Fact Check: ರಾಹುಲ್ ಗಾಂಧಿ ಸದನದಲ್ಲಿ ಹಿಂದು ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಎಡಿಟ್ ವೀಡಿಯೋ ಹಂಚಿಕೊಂಡ ನಿರ್ಮಲ ಸೀತಾರಾಮನ್

ಲೋಕಸಭೆಯಲ್ಲಿ ಇಂದು(ಸೋಮವಾರ) ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರ ನಡುವೆ ಹಿಂದೂ ಧರ್ಮದ ಕುರಿತು ತೀವ್ರ ಮಾತಿನ ಚಕಮಕಿ ನಡೆಯಿತು.

ಸಧ್ಯ ರಾಹುಲ್ ಗಾಂಧಿಯವರು ಹಿಂದು ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಹಿಂದುಗಳನ್ನು ಹಿಂಸಾತ್ಮಕ ಎಂದು ಕರೆದಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಆರೋಪಿಸಿದ್ದಾರೆ.

ಸಚಿವೆ ನಿರ್ಮಲ ಸೀತಾರಾಮನ್ ಅವರು ” @PMOIndia ಚರ್ಚೆಯಲ್ಲಿ ಮಧ್ಯಪ್ರವೇಶಿಸಿದ್ದು ಮತ್ತು LoP ಯ ಟೀಕೆಗಳ ಅಸೂಕ್ಷ್ಮತೆಯ ಬಗ್ಗೆ ತನ್ನ ಕಳವಳ ವ್ಯಕ್ತಪಡಿಸಿದ್ದು ಸರಿಯಾಗಿದೆ. @INCindia ಮತ್ತು @RahulGandhi ಅವರ ತುಷ್ಟೀಕರಣ ರಾಜಕೀಯ ಹಿಂದೂ ದ್ವೇಷದಿಂದ ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ. INDI ಅಲಯನ್ಸ್‌ನಲ್ಲಿರುವ ಅವರ ಪಾಲುದಾರರು ಸಹ ಅವರ ಭಾಷೆಯನ್ನು ಅನುಸರಿಸುವುದರಲ್ಲಿ ಆಶ್ಚರ್ಯವಿಲ್ಲ.” ಎಂದು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಇನ್ನೂ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ” ಮೂರನೇ ಬಾರಿ ವಿಫಲವಾದ ರಾಹುಲ್ ಗಾಂಧಿ ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆಯುತ್ತಾರೆ. ಪ್ರಧಾನಿ ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ರಾಹುಲ್ ಗಾಂಧಿಯವರ ಮೊದಲ ಭಾಷಣವಾಗಿದ್ದು, ಅವರು ಹಿಂದೂಗಳನ್ನು ಕೀಳಾಗಿ ಪರಿಗಣಿಸಿದ್ದಾರೆ. ಇದು ಕೇವಲ ನಾಚಿಕೆಗೇಡಿನ ಸಂಗತಿಯಲ್ಲ ಆದರೆ ಅತ್ಯಂತ ಅಪಾಯಕಾರಿಯೂ ಹೌದು.” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ರಾಹುಲ್ ಗಾಂಧಿಯವರ ಭಾಷಣದ ತುಣುಕನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್: ಸಚಿವೆ ನಿರ್ಮಲ ಸೀತಾರಾಮನ್ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಹಂಚಿಕೊಂಡಿರುವ ವೀಡಿಯೋ ತುಣುಕು ಎಡಿಟ್‌ ಮಾಡಲಾಗಿದ್ದು ತಪ್ಪುದಾರಿಗೆಳೆಯುವಂತಿದೆ.

ಸದನದಲ್ಲಿ ರಾಹುಲ್ ಗಾಂಧಿಯವರು ” ಈ ದೇಶ ಅಹಿಂಸೆಯ ದೇಶ, ಈ ದೇಶ ಹೆದರಿಸುವ ದೇಶ ಅಲ್ಲ, ನಮ್ಮ ಎಲ್ಲಾ ಮಹಾಪುರುಷರು ಅಹಿಂಸೆಯ ಕುರಿತು ಮಾತನಾಡಿದ್ದಾರೆ. ಭಯ ದೂರವಾಗಿಸುವ ಬಗ್ಗೆ ಮಾತನಾಡಿದ್ದಾರೆ. ಹೆದರಬೇಡಿ, ಹೆದರಿಸಬೇಡಿ, ಭಗವಾನ್ ಶಿವ ಹೇಳುವುದೇನೆಂದರೆ ಹೆದರಬೇಡಿ, ಹೆದರಿಸಬೇಡಿ, ಅದಕ್ಕಾಗಿಯೇ ನಾವು ಅಭಯ ಮುದ್ರೆಯನ್ನು ತೋರಿಸುತ್ತೇವೆ. ಅಹಿಂಸೆಯ ಮಾತನಾಡುತ್ತಾರೆ, ತ್ರಿಶೂಲವನ್ನು ಭೂಮಿಯಲ್ಲಿ ಚುಚ್ಚಿ ಹೇಳುತ್ತಾರೆ. ಆದರೆ ಯಾವ ಜನರು ತಮ್ಮನ್ನು ತಾವು ಹಿಂದುಗಳು ಎಂದು ಕರೆದುಕೊಳ್ಳುತ್ತಿದ್ದಾರೆ ಅವರು 24 ಗಂಟೆ ಹಿಂಸೆ, ಹಿಂಸೆ, ಹಿಂಸೆ.. ದ್ವೇಷ, ದ್ವೇಷ, ದ್ವೇಷ, ಸುಳ್ಳು, ಸುಳ್ಳು.. ಸುಳ್ಳು . ಅಸಲಿಗೆ ನೀವು ಹಿಂದುಗಳೇ ಅಲ್ಲ” ಎಂದು ಆರೋಪಿಸಿದ್ದಾರೆ.

ಮುಂದುವರೆದು ” ಹಿಂದು ಧರ್ಮದಲ್ಲಿ ಸರಳವಾಗಿ ಬರೆದಿದ್ದಾರೆ. ಸತ್ಯದ ಪರವಾಗಿ ನಿಲ್ಲಬೇಕು, ಸತ್ಯಕ್ಕೆ ವಿಮುಖವಾಗಿರಬಾರದು, ಸತ್ಯಕ್ಕೆ ಹೆದರಿಕೊಳ್ಳಬಾರದು. ಅಹಿಂಸೆ ನಮ್ಮ ಪ್ರತೀಕವಾಗಿದೆ” ಎಂದು ಅಭಯ ಮುದ್ರೆಯನ್ನು ಬಿಜೆಪಿ ನಾಯಕರಿಗೆ ತೋರಿಸಿದ್ದಾರೆ.

ಇದಕ್ಕೆ ನರೇಂದ್ರ ಮೋದಿಯವರು ” ಹಿಂದುಗಳನ್ನು ಹಿಂಸಾತ್ಮಕ ಎಂದು ಕರೆಯುವುದು ಗಂಭಿರ ವಿಚಾರವಾಗಿದೆ” ಎಂದು ರಾಹುಲ್ ಗಾಂಧಿಯವರ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು.

ನಂತರ ಪ್ರತಿಕ್ರಯಿಸಿದ ರಾಹುಲ್ ಗಾಂಧಿಯವರು “ಇಲ್ಲ, ಇಲ್ಲ.. ನರೇಂದ್ರ ಮೋದಿ ಅಂದ್ರೆ ಇಡೀ ಹಿಂದೂ ಸಮುದಾಯವಲ್ಲ, ಕೇವಲ ಬಿಜೆಪಿ ಅಂದ್ರೆ ಇಡೀ ಹಿಂದೂ ಸಮುದಾಯವಲ್ಲ ಮತ್ತು ಆರ್‌ಎಸ್‌ಎಸ್‌ ಅಂದ್ರೆ ಇಡೀ ಹಿಂದೂ ಸಮುದಾಯವಲ್ಲ” ಎಂದು ತೀವ್ರ ಟೀಕೆ ಮಾಡಿದ್ದಾರೆ.

ರಾಹುಲ್ ಗಾಂಧಿಯವರ ಭಾಷಣ ಸಂಪೂರ್ಣ ವೀಡಿಯೋ ಈಗ ಹಲವಾರು ಮಾಧ್ಯಮಗಳು ವರದಿ ಮಾಡಿದ್ದು(ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು), ರಾಹುಲ್ ಗಾಂಧಿ ಹಿಂದು ಧರ್ಮವನ್ನು ಕುರಿತು ನೀಡಿರುವ ಹೇಳಿಕೆಯನ್ನು ಈ ಕೆಳಗೆ ನೀವು ನೋಡಬಹುದು.

ರಾಹುಲ್ ಗಾಂಧಿಯವರ ವೈರಲ್ ತುಣುಕನ್ನು ಬಿಜೆಪಿ ಮಾಜಿ ಕೇಂದ್ರ ಸಚಿವೆ ಸೃತಿ ಇರಾನಿ ಕೂಡ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಯಿಸಿರುವ ಆಲ್ಟ್‌ ನ್ಯೂಸ್‌ ನ ಮಹಮ್ಮದ್ ಜುಬೈರ್ ಅವರು ಮೂಲ ವೀಡಿಯೋ ಹಂಚಿಕೊಂಡು ” ಕೆಲವರು ಸುಧಾರಿಸುವುದಿಲ್ಲ. ಅವರು ಹಿಂದೂಗಳ ಗುತ್ತಿಗೆದಾರರಾಗಿದ್ದಾರೆ, ನಾನು ಅವರಿಗೆ ಹೇಳುತ್ತೇನೆ – ಹಿಂದೂ ಎಂದರೆ ಬಿಜೆಪಿ ಅಲ್ಲ, ಆರ್‌ಎಸ್‌ಎಸ್ ಎಂದರೆ ಹಿಂದೂ ಅಲ್ಲ.” ಎಂದು ಟ್ವಿಟ್‌ ಸೃತಿ ಇರಾನಿ ಅವರಿಗೆ ಪ್ರತಿಕ್ರಯಿಸಿದ್ದಾರೆ. 

ಆದ್ದರಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ರಾಹುಲ್ ಗಾಂಧಿಯವರು ಹಿಂದು ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಬಿಂಬಿಸುವ ಸಲುವಾಗಿ ಎಡಿಟ್ ಮಾಡಿದ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಇವರ ಪೋಸ್ಟ್‌ಗೆ ಪ್ರತಿಕ್ರಯಿಸಿರುವ ಅನೇಕರು ಮೂಲ ವೀಡಿಯೋ ಹಂಚಿಕೊಂಡು ಜವಬ್ದಾರಿಯುತ ಸ್ಥಾನದಲ್ಲಿದ್ದು ಈ ರೀತಿ ಜನರನ್ನು ದಿಕ್ಕು ತಪ್ಪಿಸುವ ಸುಳ್ಳು ಮಾಹಿತಿಯ ವೀಡಿಯೋ ಹಂಚಿಕೊಂಡ ಕಾರಣಕ್ಕಾಗಿ ಬಿಜೆಪಿ ನಾಯಕರನ್ನು ಟೀಕಿಸುತ್ತಿದ್ದಾರೆ.


ಇದನ್ನು ಓದಿ: ಭಾರತೀಯ ಸೈನಿಕರು ಅಪಘಾತದಲ್ಲಿ ಹುತಾತ್ಮರಾಗಿದ್ದಾರೆ ಹೊರತು ಉಗ್ರರಿಂದ ಹತರಾಗಿಲ್ಲ


ವೀಡಿಯೋ ನೋಡಿ: 18 ನೇ ಶತಮಾನದ ಸಾಕ್ಷಾರತೆಯ ಸಮಿಕ್ಷೆಯಲ್ಲಿ ಉತ್ತರ ಭಾರತ 97%, ದಕ್ಷಿಣ ಭಾರತ 100% ಸಾಧಿಸಿತ್ತು ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವ

Leave a Reply

Your email address will not be published. Required fields are marked *