Fact Check | ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿಯಲ್ಲಿ ನಡೆದ ಕೊಲೆಗೆ ಮುಸ್ಲಿಂ ಯುವಕ ಕಾರಣ ಎಂಬುದು ಸುಳ್ಳು

ಸಾಮಾಜಿಕಿ ಜಾಲತಾಣದಲ್ಲಿ ” ಸಲೀಂ ಎಂಬ ಮುಸ್ಲಿಂ ವ್ಯಕ್ತಿ ಆರತಿ ಎಂಬ ಹಿಂದೂ ಯುವತಿಯನ್ನು ಹಾಡಹಗಲೇ ಸಾರ್ವಜನಿಕರ ಎದುರಿನಲ್ಲೇ ಕೊಂದಿದ್ದಾನೆ. ಅವನ ಪ್ರೀತಿಯ ಪ್ರಸ್ತಾಪವನ್ನು ಆಕೆ ಈ ಹಿಂದೆ ತಿರಸ್ಕರಿಸಿದ್ದಳು. ಇದರ ಜೊತೆಗೆ ಆಕೆಗೆ ಬೇರೋಬ್ಬರೊಂದಿಗೆ ಅಕ್ರಮ ಸಂಬಂಧವಿದೆ ಎಂದು ಭಾವಿಸಿ, ಈತ ಈ ಕೃತ್ಯವನ್ನು ಎಸಗಿದ್ದಾನೆ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಈ ಕೊಲೆಯ ವಿಡಿಯೋ ಅಂತರ್ಜಾಲದಲ್ಲಿ ಬಹುದೊಡ್ಡ ಚರ್ಚೆಯನ್ನು ಕೂಡ ಹುಟ್ಟು ಹಾಕಿದೆ.

ಇದಕ್ಕೆ ಕೋಮು ಆಯಾಮವನ್ನು ಕೊಡಲು ಹಲವರು ಪ್ರಯತ್ನಿಸುತ್ತಿದ್ದು, “ಈತ ಮುಸ್ಲಿಂ. ಈತನ ಈ ಹೀನ ಕೃತ್ಯದ ಹಿಂದೆ ಲವ್‌ ಜಿಹಾದ್‌ನ ಉದ್ದೇಶವಿದೆ” ಎಂದು ಕೂಡ ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಪೋಸ್ಟ್‌ ನೋಡಿದ ಹಲವರು ಈತ ಮುಸ್ಲಿಂ ಎಂದು ಭಾವಿಸಿ ಇದರ ಹಿಂದೆ ಲವ್‌ ಜಿಹಾದ್‌ ಇರಬಹುದು ಎಂದುಕೊಂಡು ಇದೇ ಪೋಸ್ಟ್‌ಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಆದರೂ ಈ ಪೋಸ್ಟ್‌ ಹಲವು ಅನುಮಾನಗಳನ್ನು ಹುಟ್ಟು ಹಾಕಿರುವುದರಿಂದ ಈ ಕುರಿತು ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಈ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವೀಡಿಯೊದಿಂದ ಕೀಫ್ರೇಮ್‌ಗಳನ್ನು ಬಳಸಿಕೊಂಡು Google ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಈ ಹುಡುಕಾಟವು ವೀಡಿಯೊದ ಪ್ರಮುಖ ಫ್ರೇಮ್‌ಗಳಲ್ಲಿ ಒಂದನ್ನು ಒಳಗೊಂಡಿರುವ ‘TV9 ಭಾರತವರ್ಷ’ದ ಸುದ್ದಿ ವರದಿಗೆ ನಮ್ಮನ್ನು ಕರೆದೊಯ್ಯಿದಿದೆ.

ಈ ವರದಿಯ ಪ್ರಕಾರ,  ಘಟನೆಯು 18 ಜೂನ್ 2024 ರಂದು ಬೆಳಿಗ್ಗೆ 8:30 ರ ಸುಮಾರಿಗೆ ಮುಂಬೈ ಬಳಿಯ ವಸಾಯಿ ಪ್ರದೇಶದಲ್ಲಿ ಸಂಭವಿಸಿದೆ. ಮೃತರು 20 ವರ್ಷದ ಆರತಿ ಯಾದವ್ ಮತ್ತು ಆರೋಪಿ ರೋಹಿತ್ ಯಾದವ್ ಎಂದು ವರದಿ ತಿಳಿಸಿದೆ. ರೋಹಿತ್ ಆರತಿಯ ತಲೆಯ ಮೇಲೆ ವ್ರೆಂಚ್‌ನಿಂದ ಹಲವಾರು ಬಾರಿ ಕ್ರೂರವಾಗಿ ಹಲ್ಲೆ ನಡೆಸಿ, ಕೊಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. 

ಈ ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ಕಂಡುಹಿಡಿಯಲು ನಾವು ಕೆಲವೊಂದು ಕೀವರ್ಡ್ ಬಳಸಿ ಹುಡುಕಾಟ ನಡೆಸಿದ್ದೇವೆ. ಈ ಹುಡುಕಾಟವು ನಮಗೆ ಹಲವಾರು ಸುದ್ದಿ ವರದಿಗಳು ಲಭ್ಯವಾಗಲು ನೆರವಾಯಿತು. ಈ ವರದಿಗಳ ಪ್ರಕಾರ, ಆರತಿ ಮತ್ತು ರೋಹಿತ್ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಆರತಿ ಕೆಲವೊಂದು ಕಾರಣಗಳಿಂದ ಆರೋಪಿ ರೋಹಿತ್‌ನಿಂದ ಬೇರೆಯಾಗಲು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಆರತಿಗೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂದು ಶಂಕಿಸಿದ್ದ ರೋಹಿತ್ ಯಾದವ್ 18 ಜೂನ್ 2024 ರಂದು ಬೆಳಿಗ್ಗೆ 8:30 ರ ಸುಮಾರಿಗೆ ಅವಳನ್ನು ಹಿಂಬಾಲಿಸಿದ್ದಾನೆ. ಬಳಿಕ ಆಕೆಯ ಮೇಲೆ ದಾಳಿ ಮಾಡಿ ಮನಸ್ಸೋ ಇಚ್ಚೆ ಹಲ್ಲೆ ನಡೆಸಿದ್ದಾನೆ. ಆಕೆ ತೀವ್ರ ಸ್ವರೂಪದ ಗಾಯದಿಂದಾಗಿ ಮೃತ ಪಟ್ಟಿದ್ದಾಳೆ.

ಈ ಎಲ್ಲಾ ವರದಿಗಳಲ್ಲಿ ಎಲ್ಲಿಯೂ ಕೂಡ ಮುಸ್ಲಿಂ ಹೆಸರಿನ ಯಾವ ವ್ಯಕ್ತಿಯೂ ಕಂಡು ಬಂದಿಲ್ಲ. ಇನ್ನು ಹೆಚ್ಚಿನ ಮಾಹಿತಿಗಾಗಿ ಮಹಾರಾಷ್ಟ್ರ ಪೊಲೀಸ್ ವೆಬ್‌ಸೈಟ್‌ನಲ್ಲಿ ಈ ಪ್ರಕರಣದಲ್ಲಿ ದಾಖಲಿಸಲಾದ ಎಫ್‌ಐಆರ್ ಅನ್ನು ಪರಿಶೀಲಿಸಿದಾಗ. ಎಫ್‌ಐಆರ್ ಪ್ರಕಾರ , ಈ ಘಟನೆಯು 18 ಜೂನ್ 2024 ರಂದು ಬೆಳಿಗ್ಗೆ 8:30 ರ ಸುಮಾರಿಗೆ ವಸೈ ಪೂರ್ವದ ಚಿಂಚ್‌ಪಾಡಾ ಪ್ರದೇಶದಲ್ಲಿ ನಡೆದಿದ್ದು, ಆರೋಪಿ ರೋಹಿತ್ ರಾಮನಿವಾಸ್ ಯಾದವ್ ಎಂಬುದು ಖಚಿತವಾಗಿದೆ. ಮೃತ ಪಟ್ಟ ಯುವತಿಯು ಹಿಂದೂ ಹಾಗೂ ಕೊಲೆಗಡುಕ ರೋಹಿತ್‌ ಕೂಡ ಹಿಂದು ಎಂಬುದು ಸಾಬೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಪ್ರದೇಶದಲ್ಲಿ ನಡೆದ ಕೊಲೆಯ ವೀಡಿಯೊವನ್ನು ಸುಳ್ಳು ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮುನ್ನ ಎಚ್ಚರ ವಹಿಸಿ. ಹಾಗೂ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಅಪರಾಧವಾಗಿದೆ.


ಇದನ್ನೂ ಓದಿ : Fact Check: ಉದ್ಯಮಿ ಜಾರ್ಜ್ ಸೊರೊಸ್ ಜೊತೆ ಫೋಟೋದಲ್ಲಿರುವ ಮಹಿಳೆ ಅವರ ಪತ್ನಿಯೇ ಹೊರತು ಮನಮೋಹನ್ ಸಿಂಗ್ ಅವರ ಮಗಳಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *