Fact Check: NEET ಹಗರಣದ ಆರೋಪಿಗಳನ್ನು ಜಾರ್ಖಂಡ್‌ನ ದಿಯೋಘರ್‌ನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಬಂಧಿಸಿದ್ದಾರೆ ಎಂಬುದು ಸುಳ್ಳು

NEET

NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರು ಆರೋಪಿಗಳು ಜಾರ್ಖಂಡ್‌ನ ದಿಯೋಘರ್‌ನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ತಲೆಮರೆಸಿಕೊಂಡಿರುವುದನ್ನು ತೋರಿಸುತ್ತದೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಕೆಲವು ಜನರನ್ನು ಕಟ್ಟಡದಿಂದ, ಬಂಧಿಸಿ ಮತ್ತು ಕಾರಿನಲ್ಲಿ ಕರೆದೊಯ್ಯುತ್ತಿರುವ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ದೇಶದ ಪ್ರಮುಖ ಪರೀಕ್ಷೆಗಳನ್ನು ನೋಡಿಕೊಳ್ಳುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಈಗ ತೀವ್ರ ತನಿಖೆಯನ್ನು ಎದುರಿಸುತ್ತಿದೆ. ಮೇ 5, 2024 ರಂದು ನಡೆಸಲಾದ NEET UG ಪರೀಕ್ಷೆಯು ಅದರ ಫಲಿತಾಂಶಗಳನ್ನು ಜೂನ್ 4, 2024 ರಂದು ಪ್ರಕಟಿಸಲಾಯಿತು. ಫಲಿತಾಂಶಗಳನ್ನು ಪ್ರಕಟಿಸಿದ ನಂತರ, ಅಭ್ಯರ್ಥಿಗಳು ಹಲವಾರು ಕಳವಳಗಳನ್ನು ವ್ಯಕ್ತಪಡಿಸಿದರು, NTA ಯ ಫಲಿತಾಂಶ ಮತ್ತು ಪರೀಕ್ಷೆಯ ಅಕ್ರಮಗಳ ಬಗ್ಗೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಪ್ರೇರೇಪಿಸಿದರು, ಇದು NEET PG ಪರೀಕ್ಷೆಗಳ ಮುಂದೂಡಿಕೆಗೆ ಕಾರಣವಾಯಿತು. ನಂತರ CSIR ಮತ್ತು UGC-NET ಪರೀಕ್ಷೆಯಲ್ಲಿಯೂ ಸಹ ಅಕ್ರಮ ನಡೆದಿರುವುದು ತಿಳಿದು ಬಂದು ಪರೀಕ್ಷೆ ನಡೆದ ಮಾರನೇ ದಿನವೇ UGC-NET ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. 

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಕೇಂದ್ರ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಿದೆ. ಸಿಬಿಐ ತಂಡಗಳು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಐದು ರಾಜ್ಯಗಳಾದ್ಯಂತ 27 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಪಾಟ್ನಾದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಸಂಜೀವ್ ಮುಖಿಯಾ ಅವರನ್ನು ಬಂಧಿಸಲು ಆರ್ಥಿಕ ಅಪರಾಧ ವಿಭಾಗದ ಆರು ತಂಡಗಳು ದಾಳಿ ನಡೆಸುತ್ತಿವೆ. ಜೂನ್ 23, 2024 ರಂದು, ಬಿಹಾರದ ಆರ್ಥಿಕ ಅಪರಾಧಗಳ ಘಟಕದ ಅಧಿಕಾರಿಗಳು ಜಾರ್ಖಂಡ್‌ನ ದಿಯೋಘರ್‌ನಿಂದ ಆರು ಜನರನ್ನು ಬಂಧಿಸಿ ಪಾಟ್ನಾದ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗಾಗಿ ಕರೆತಂದಿದ್ದರು. 

ಎಕ್ಸ್‌ನಲ್ಲಿ ಪರಿಶೀಲಿಸಿದ ಬಳಕೆದಾರರು “NEET ಪ್ರಶ್ನೆ-ಪತ್ರಿಕೆ ಸೋರಿಕೆಯ 6 ಆರೋಪಿಗಳು ಜಾರ್ಖಂಡ್‌ನ ದಿಯೋಘರ್‌ನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಅಡಗಿಕೊಂಡಿದ್ದರು” ಎಂದು ಹಿಂದಿ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಇದನ್ನು ಅನೇಕರು ವಾಟ್ಸಾಪ್ ನಲ್ಲಿ ಸಹ ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್: ವೈರಲ್ ವೀಡಿಯೊದಲ್ಲಿ ANI ಸುದ್ದಿ ಸಂಸ್ಥೆಯ ಲೋಗೋವನ್ನು ಗಮನಿಸಬಹುದು. ಇದರ ಸುಳಿವು ಪಡೆದು, ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದಾಗ ಅದೇ ವೀಡಿಯೊವನ್ನು ಜೂನ್ 23, 2024 ರಂದು ANI ಯ ಅಧಿಕೃತ X ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ ಎಂದು ಕಂಡುಬಂದಿದೆ.

“ಬಿಹಾರ: ಯುಜಿ ನೀಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಯ ನಂತರ ಪಾಟ್ನಾದ ಎಲ್‌ಎನ್‌ಜೆಪಿ ಆಸ್ಪತ್ರೆಯಿಂದ ಕರೆದೊಯ್ಯಲಾಯಿತು. ಬಿಹಾರ ಪೊಲೀಸರು ಜೂನ್ 21 ರಂದು ಜಾರ್ಖಂಡ್‌ನ ದಿಯೋಘರ್‌ನಿಂದ ಆರೋಪಿಗಳನ್ನು ಬಂಧಿಸಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ಎಬಿಪಿ ವರದಿಯ ಪ್ರಕಾರ, ಆರೋಪಿಯ ವೈದ್ಯಕೀಯ ಪರೀಕ್ಷೆಗಾಗಿ ಆರ್ಥಿಕ ಅಪರಾಧಗಳ ಘಟಕ (ಇಒಯು) ತಂಡವು ಎಲ್‌ಎನ್‌ಜೆಪಿ ಆಸ್ಪತ್ರೆಗೆ ಆಗಮಿಸಿದೆ. ಪರೀಕ್ಷೆಯ ನಂತರ, EOU ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತು ಮತ್ತು ನಂತರ ಅವರನ್ನು ಜೈಲಿಗೆ ಕಳುಹಿಸಿತು.

ಎಬಿಪಿ ಬಿಹಾರದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಇದರ ವಿಡಿಯೋ ವರದಿ ಲಭ್ಯವಿದೆ.

ವಿಡಿಯೋದಲ್ಲಿ ತೋರಿಸಿರುವ ಬಿಹಾರದ ಪಾಟ್ನಾದಲ್ಲಿರುವ ಎಲ್‌ಎನ್‌ಜೆಪಿ ಆಸ್ಪತ್ರೆಯನ್ನು ಗೂಗಲ್ ಮ್ಯಾಪ್‌ನಲ್ಲಿಯೂ ಕಾಣಬಹುದು.

ಆದ್ದರಿಂದ NEET ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರು ಆರೋಪಿಗಳು ಜಾರ್ಖಂಡ್‌ನ ದಿಯೋಘರ್‌ನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ತಲೆಮರೆಸಿಕೊಂಡಿದ್ದರು ಎಂಬುದು ಸುಳ್ಳು.


ಇದನ್ನು ಓದಿ: ರಾಜಸ್ಥಾನದಲ್ಲಿ ಒಂದೇ ಬಂಡೆಯಿಂದ ಕೆತ್ತಿದ 5,000 ವರ್ಷಗಳ ಹಳೆಯ ದೇವಾಲಯ ಪತ್ತೆ ಎಂಬುದು ಸುಳ್ಳು


ವೀಡಿಯೋ ನೋಡಿ: ಮುಜರಾಯಿ ಇಲಾಖೆಯ 450 ಕೋಟಿ ರೂಗಳನ್ನು ರಾಜ್ಯ ಸರ್ಕಾರ ಜೇಬಿಗಿಳಿಸಿಕೊಂಡಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *