Fact Check: ಕರ್ನಾಟಕದಲ್ಲಿ ಜೈನ ಮುನಿಗೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂದು ಮಹೇಶ್ ವಿಕ್ರಂ ಹೆಗ್ಡೆ ಹಂಚಿಕೊಂಡಿದ್ದ ಸುಳ್ಳು ಮತ್ತೆ ವೈರಲ್ 

ಇತ್ತೀಚೆಗೆ, ಕರ್ನಾಟಕದಲ್ಲಿ ಜೈನ ಸನ್ಯಾಸಿಯೊಬ್ಬರ ಮೇಲೆ ಮುಸ್ಲಿಮರಿಂದ ಹಲ್ಲೆ ನಡೆದಿದೆ ಎಂಬ ಹೇಳಿಕೆಯೊಂದಿಗೆ ಕೈಗೆ ಗಾಯವಾಗಿರುವ ವ್ಯಕ್ತಿಯ ಫೋಟೋ ಒಂದು ಹರಿದಾಡುತ್ತಿದೆ. ಜೈನ ಮುನಿಯ ಮೇಲಿನ ದಾಳಿಕೋರರು ‘ಕಾಂಗ್ರೆಸ್ ಜಿಂದಾಬಾದ್’ ಎಂದು ಘೋಷಣೆ ಕೂಗಿದರು ಎಂದು ಪ್ರತಿಪಾದಿಸಲಾಗುತ್ತಿದೆ. “ಇದು ಕಾಂಗ್ರೆಸ್‌ಗೆ ಮತ ಹಾಕುವ ಹಿಂದೂಗಳ ಭವಿಷ್ಯ” ಎಂದು ಸಂದೇಶದೊಂದಿಗೆ ಈ ಪೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. 

ಈ ಪೋಟೋವನ್ನು ಮೊದಲು ಹರಿಬಿಟ್ಟವರು ಸುಳ್ಳು ಸುದ್ಧಿ ಹರಡಲು ಮತ್ತು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಲು ಕುಖ್ಯಾತಿ ಪಡೆದಿರುವ ಪೋಸ್ಟ್‌ ಕಾರ್ಡ್‌ ಕನ್ನಡ ಮತ್ತು ಟಿವಿ ವಿಕ್ರಮ ಚಾನೆಲ್‌ನ ಮುಖ್ಯ ಸಂಪಾದಕ ಮಹೇಶ್ ವಿಕ್ರಂ ಹೆಗಡೆ ಈ ಚಿತ್ರವನ್ನು ಕೋಮು ದ್ವೇಷ ಬಿತ್ತುವ ರೀತಿಯಲ್ಲಿ ಪೋಸ್ಟ್‌ ಕಾರ್ಡ್‌ ಮೂಲಕ 2018ರಲ್ಲಿಯೇ ಹರಿಬಿಟ್ಟಿದ್ದಾನೆ. ನಂತರ ಇದು ಹಿಂದಿ ಭಾಷೆಯಲ್ಲಿ ಸೇರಿದಂತೆ ಭಾರತದಾದ್ಯಂತ ಕರ್ನಾಟಕದಲ್ಲಿ ಜೈನ ಮುನಿಗೆ ಕಾಂಗ್ರೆಸ್‌ ಬೆಂಬಲಿತ ಮುಸ್ಲೀಮರು ಹಲ್ಲೆ ನಡೆಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.

 

ಫ್ಯಾಕ್ಟ್‌ಚೆಕ್: 2018 ರಲ್ಲಿ ಕರ್ನಾಟಕದಲ್ಲಿ ಚುನಾವಣೆಗೆ ಮುನ್ನ ತೋಳಿನಲ್ಲಿ ಗಾಯವಾದ ವ್ಯಕ್ತಿಯೊಬ್ಬರ ಫೋಟೋ ಒಂದು ವ್ಯಾಪಕವಾಗಿ ಹರಡಿತ್ತು. ಇದನ್ನು “ತುಂಬಾ ದುಃಖದ ಸುದ್ದಿ, ನಿನ್ನೆ ಕಾರಂತಕದಲ್ಲಿ ಜೈನ ಮುನಿ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ… ಸಿದ್ದರಾಮಯ್ಯನವರ ಕರ್ನಾಟಕದಲ್ಲಿ ಯಾರೂ ಸುರಕ್ಷಿತವಾಗಿಲ್ಲ’ ಎಂಬ ಸಂದೇಶವನ್ನು ಆಗ ಹರಿಬಿಡಲಾಗಿತ್ತು.

ನಕಲಿ ಸುದ್ದಿ ವೆಬ್‌ಸೈಟ್ ಪೋಸ್ಟ್‌ಕಾರ್ಡ್ ಸಂಸ್ಥಾಪಕ ಮಹೇಶ್ ಹೆಗ್ಡೆ ಅವರನ್ನು ಬೆಂಗಳೂರು ಕೇಂದ್ರ ಅಪರಾಧ ವಿಭಾಗವು ನಕಲಿ ಮತ್ತು ಕೋಮು ಸೂಕ್ಷ್ಮ ಸುದ್ದಿಗಳನ್ನು ಹರಡಿದ್ದಕ್ಕಾಗಿ ಮಾರ್ಚ್ 18, 2018 ರಂದು ಬಂಧಿಸಿದ್ದರು, ಹೆಗ್ಡೆ ಮತ್ತು ಅವರ ಪೋಸ್ಟ್‌ಕಾರ್ಡ್ ಜೈನ ಸನ್ಯಾಸಿಯೊಬ್ಬರ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆಯಾಗಿದೆ ಎಂದು ಸುಳ್ಳು ಹರಡಿದ್ದರು. ಈ ಘಟನೆ ನಡೆದಿರುವುದಕ್ಕೆ ಯಾವುದೇ ವಿಶ್ವಾಸಾರ್ಹ ಸುದ್ದಿ ಮೂಲಗಳು ಅಥವಾ ಪೊಲೀಸ್ ಅಧಿಕಾರಿಯಿಂದ ಯಾವುದೇ ದೃಢೀಕರಣ ಇಲ್ಲದ ಕಾರಣ ಕೋಮು ದ್ವೇಷದ ಸುಳ್ಳು ಸುದ್ಧಿ ಹರಿದ್ದಕ್ಕಾಗಿ ಪೋಲಿಸರು ಕ್ರಮ ಕೈಗೊಂಡಿದ್ದರು. 

ಆದರೆ ಘಟನೆಯ ಬಗ್ಗೆ ಪೊಲೀಸರು ವಿಭಿನ್ನವಾದ ಕಥೆಯನ್ನು ಹಂಚಿಕೊಂಡಿದ್ದಾರೆ. ಜೈನ ಸನ್ಯಾಸಿ ಶ್ರೀ ಉಪಾಧ್ಯಾಯ ಮಾಯಾಂಕ್ ಸಾಗರ್ಜಿ ಮಹಾರಾಜ್ ಅವರು ತಮ್ಮ ಅನುಯಾಯಿಗಳೊಂದಿಗೆ ಶ್ರವಣಬೆಳಗೊಳದ ಉತ್ಸವದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದಾಗ ಪಾನಮತ್ತ ಚಾಲಕನು ತನ್ನ ಬೈಕ್ ಅನ್ನು ಅತಿವೇಗದಲ್ಲಿ ಚಲಾಯಿಸಿ ಅವರ ಮೇಲೆ ಡಿಕ್ಕಿ ಹೊಡೆದು ಸನ್ಯಾಸಿ ಮತ್ತು ಅವರ ಅನುಯಾಯಿಗಳಿಗೆ ಗಾಯಗಳಾಗಿವೆ ಎಂದು ಅವರು ಹೇಳಿದರು. ದಾರಿಹೋಕರು ಸನ್ಯಾಸಿಗೆ ಸಹಾಯ ಮಾಡಿದರು ಮತ್ತು ದಾಳಿಯಲ್ಲಿ ಗಾಯಗೊಂಡ ಎಲ್ಲರಿಗೂ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು.

ಘಟನೆಯ ಸತ್ಯಾಸತ್ಯತೆ ತಿಳಿದಿದ್ದರೂ ಮಹೇಶ್ ವಿಕ್ರಂ ಹೆಗ್ಡೆ ಮತ್ತು ಅವರ ವೆಬ್‌ಸೈಟ್ ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸಲು ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಸುಳ್ಳು ಸುದ್ದಿಯನ್ನು ಪ್ರಕಟಿಸಿದೆ ಎಂದು ಪೊಲೀಸರು ಹೇಳುತ್ತಾರೆ. ಸಾವಿರಾರು ಜನರು ಈ ಸುಳ್ಳು ಸುದ್ದಿಯನ್ನು ಓದಿದ್ದಲ್ಲದೆ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಪೊಲೀಸ್ ಠಾಣೆಯಲ್ಲಿ (ಸೈಬರ್ ಕ್ರೈಂ) ಪ್ರಕರಣ ದಾಖಲಾಗಿದ್ದು, ಅದರಂತೆ ಮಹೇಶ್ ಹೆಗಡೆಯನ್ನು ಬಂಧಿಸಲಾಗಿತ್ತು. ಅನ್ವಯಿಸಲಾದ ಸೆಕ್ಷನ್‌ಗಳೆಂದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66, ಸೆಕ್ಷನ್ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), ಸೆಕ್ಷನ್ 120 ಬಿ (ಅಪರಾಧದ ಪಿತೂರಿ) ಮತ್ತು ಸೆಕ್ಷನ್ 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು).

ಮಹಿಳಾ ಯೋಧರಾದ ರಾಣಿ ಚೆನ್ನಮ್ಮ ಮತ್ತು ಒನಕೆ ಓಬವ್ವರ ವಿರುದ್ಧ ಸಹ ಇದೇ ರೀತಿ ಆಕ್ಷೇಪಾರ್ಹ ಲೇಖನ ಮತ್ತು ಹೇಳಿಕೆಗಳನ್ನು ವಿಕ್ರಂ ಹೆಗ್ಡೆ ಪೋಸ್ಟ್‌ಕಾರ್ಡ್‌ನಲ್ಲಿ ನೀಡಿದ್ದಾರೆ ಎಂದು ಆರೋಪಿಸಿ 2017 ರ ನವೆಂಬರ್ 28 ರಂದು ದಾಖಲಿಸಿದ ಕಥೆಯ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅನ್ವಯಿಸಲಾದ ಸೆಕ್ಷನ್‌ 295(A) ಆಗಿತ್ತು, ಇದು ‘ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳ ಬಗ್ಗೆ ವ್ಯವಹರಿಸುತ್ತದೆ, ಧಾರ್ಮಿಕ ಭಾವನೆಗಳನ್ನು ಅಥವಾ ಯಾವುದೇ ವರ್ಗವನ್ನು ಅದರ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಆಕ್ರೋಶಗೊಳಿಸುವ ಉದ್ದೇಶವನ್ನು ಹೊಂದಿದೆ.’ ಎಂದು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. 

ಮಹೇಶ್ ವಿಕ್ರಂ ಹೆಗ್ಡೆ ಇಂತಹ ಸುಳ್ಳು ಸುದ್ದಿಯನ್ನು ಹರಡಿ ಪೋಲಿಸರಿಂದ ಪ್ರಕರಣ ದಾಖಲಿಸಿಕೊಂಡಿದ್ದು ಇದೇ ಮೊದಲೇನಲ್ಲ. ಅನೇಕ ಬಾರಿ ಎರಡು ಧರ್ಮದ ನಡುವೆ ದ್ವೇಷ ಬಿತ್ತುವ ಕೆಲಸವನ್ನು ಹೆಗ್ಡೆ ನೇತೃತ್ವದ ಪೋಸ್ಟ್‌ ಕಾರ್ಡ್ ಮತ್ತು ಟಿವಿ ವಿಕ್ರಮ ಮೂಲಕ ನಿರಂತರವಾಗಿ ಮುಂದುವರೆಸಿಕೊಂಡು ಬರುತ್ತಿದ್ದಾನೆ. ಈ ಹಿಂದೆ ಕೆಲವು ಕ್ರಿಶ್ಚಿಯನ್ ಗುಂಪುಗಳು ತಮಿಳುನಾಡಿನ ಮಧುರೈ ಜಿಲ್ಲೆಯ ಪ್ರಸಿದ್ಧ ಕಲಿಯಾರ್ ಕೋವಿಲ್ ಮತ್ತು ಶಿವಗಾಮಿ ದೇವಸ್ಥಾನಗಳನ್ನು ಪ್ರವೇಶಿಸಿ ಆಸ್ತಿಯನ್ನು ತಮ್ಮದೆಂದು ಆರೋಪಿಸುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯನ್ನು ಮಾಡಲಾಗಿತ್ತು. ನಂತರ ವಿವಾದಿಸಿದ ಶಿವಗಂಗೈ ಜಿಲ್ಲೆಯ ಪೊಲೀಸ್ ಅಧೀಕ್ಷಕ ಟಿ ಜಯಚಂದ್ರನ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ,ಹಲವಾರು ದಶಕಗಳಿಂದ ಶಾಂತಿಯುತವಾಗಿ ಬದುಕುತ್ತಿರುವ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆಯನ್ನು ಉಂಟುಮಾಡುವ ದುರುದ್ದೇಶದಿಂದ ಈ ಸುದ್ದಿಯು ತಪ್ಪಾಗಿ ಹರಡಿದ್ದಾರೆ” ಎಂದು ಸ್ಪಷ್ಟಪಡಿಸಿದ್ದರು. 

ಆದರೆ ಪೋಲೀಸರ ನಡೆಯನ್ನು ಖಂಡಿಸಿದ ಬಿಜೆಪಿ ನಾಯಕರು ಸಿದ್ದರಾಮಯ್ಯನವರ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ದೂರಿದ್ದರು. ಮತ್ತು ಇದರಲ್ಲಿ ಮಹೇಶ್ ವಿಕ್ರಂ ಹೆಗ್ಡೆಯವರ ತಪ್ಪು ಇಲ್ಲ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಮತ್ತು ಸಂಸದ ಅನಂತ್ ಕುಮಾರ್ ಹೆಗ್ಡೆ, ಪ್ರೀತಿ ಗಾಂಧಿ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಅನೇಕರು ವಿಕ್ರಂ ಹೆಗ್ಡೆ ಪರವಾಗಿ ಸಮರ್ಥಿಸಿಕೊಂಡಿದ್ದರು.

ಆದ್ದರಿಂದ ಕರ್ನಾಟಕದಲ್ಲಿ ಜೈನ ಮುನಿಗಳಿಗೆ ಕಾಂಗ್ರೆಸ್‌ ಬೆಂಬಲಿತ ಮುಸ್ಲಿಂ ತಂಡವೊಂದು ಹಲ್ಲೆ ನಡೆಸಿದೆ ಎಂಬುದು ಸಂಪೂರ್ಣ ಸುಳ್ಳು. ಇದು ಸಮುದಾಯಗಳ ನಡುವೆ ದ್ವೇಷ ಬಿತ್ತಲು ಟಿವಿ ವಿಕ್ರಮ ಸಂಪಾದಕ ಮಹೇಶ್ ವಿಕ್ರಂ ಹೆಗ್ಡೆ ಹಂಚಿಕೊಂಡ ಸುಳ್ಳು ಸುದ್ದಿಯಾಗಿದೆ.


ಇದನ್ನು ಓದಿ: ನೆಹರು, ಇಂದಿರಾ ಗೆಲುವಿನ ಅಂತರವನ್ನು ಮೋದಿಯವರ ಗೆಲುವಿನ ಅಂತರದೊಂದಿಗೆ ಹೋಲಿಸುವುದು ಸೂಕ್ತವಲ್ಲ


ವೀಡಿಯೋ ನೋಡಿ: Kaaba | ಕಾಬಾದಲ್ಲಿ ಅಲ್ಲೇಶ್ವರನ ಪೋಟೋ ಎಂದು ತಪ್ಪು ಪೋಟೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *