Fact Check: ಬೀದಿ ನಾಟಕದ ವೀಡಿಯೋವನ್ನು ಕೇರಳದಲ್ಲಿ RSS ಬೆಂಬಲಿತ ಮಹಿಳೆಯನ್ನು ಮುಸ್ಲಿಮರು ಹತ್ಯೆ ಮಾಡಿದ್ದಾರೆ ಎಂದು ಹಂಚಿಕೆ

“ಕೇರಳದಲ್ಲಿ RSS ಬೆಂಬಲಿತ ಹಿಂದು ಮಹಿಳೆಯೊಬ್ಬಳು ಮುಸ್ಲಿಮರ ಗುಂಡಿಗೆ ಬಲಿಯಾಗಿದ್ದಾಳೆ(केरल में RSS समर्थक हिन्दू महिला को मुस्लिमों ने गोली मारी)” ಎಂದು ಪ್ರತಿಪಾದಿಸಿದ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.(ಇಲ್ಲಿ ಮತ್ತು ಇಲ್ಲಿ) ವೀಡಿಯೋದಲ್ಲಿ ಮಲಯಾಳಂನಲ್ಲಿ ಮಾತನಾಡುವುದನ್ನು ನಾವು ಕೇಳಬಹುದು.

ಈ ವೈರಲ್ ವೀಡಿಯೋ ಕನ್ನಡದ ಖ್ಯಾತ ಲೇಖಕ ಪಿ. ಲಂಕೇಶ್ ಅವರ ಮಗಳು ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಸಂದರ್ಭದ ವೀಡಿಯೋ ಎಂದು ಪತ್ತೆಯಾಗಿದೆ.

ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ಗೌರಿ ಲಂಕೇಶ್ ಅವರನ್ನು ತೀವ್ರಗಾಮಿ ಬಲಪಂಥೀಯ ಗುಂಪು ಸನಾತನ ಸಂಸ್ಥೆ ಹತ್ಯೆ ಮಾಡಿದೆ ಎಂದು ಆರೋಪಿಸಲಾಗಿದೆ. ಲಂಕೇಶ್ ಹತ್ಯೆಯನ್ನು ಐದು ವರ್ಷಗಳಿಂದ ಯೋಜಿಸಲಾಗಿತ್ತು ಎಂದು ಆರೋಪಪಟ್ಟಿಯನ್ನು ಉಲ್ಲೇಖಿಸಿ ವರದಿ ಹೇಳಿದೆ.

ಕೊಲೆಯ ಪ್ರಮುಖ ಆರೋಪಿ ಪರಶುರಾಮ್ ವಾಘಮಾರೆ, ಸನಾತನ ಸಂಸ್ಥೆ ಮತ್ತು ಶ್ರೀರಾಮ ಸೇನೆಯಂತಹ ಬಲಪಂಥೀಯ ಗುಂಪುಗಳೊಂದಿಗೆ ಸಂಬಂಧವನ್ನು ಹೊಂದಿದ್ದನು. ಎಸ್‌ಐಟಿ ತನಿಖೆಯ ವೇಳೆ ವಾಘಮಾರೆ ಅವರು ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಕಾರಣಕ್ಕೆ ಲಂಕೇಶ್ ಹತ್ಯೆಯನ್ನು ಬೇರೊಬ್ಬರ ಪ್ರೇರಣೆಯಿಂದ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದಲ್ಲದೇ ನರೇಂದ್ರ ದಾಭೋಲ್ಕರ್‌ನಿಂದ ಗೋವಿಂದ್ ಪನ್ಸಾರೆ ಮತ್ತು ಎಂಎಂ ಕಲಬುರ್ಗಿಯವರಂತಹ ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರ ಹತ್ಯೆಗಳಲ್ಲಿ ಸನಾತನ ಸಂಸ್ಥೆ ಭಾಗಿಯಾಗಿದೆ ಎಂದು ಆರೋಪಿಸಲಾಗಿದೆ.

ಬೀದಿ ನಾಟಕದಲ್ಲಿ ನಟರ ನಡುವೆ ಸಂಭಾಷಣೆ ವಿನಿಮಯವಾಗುತ್ತದೆ ಮತ್ತು ಅದನ್ನು ಮಲಯಾಳಂನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಇಲ್ಲಿ ಓದಿ:

ದಾಳಿಕೋರ: ಅವಳನ್ನು ಕೊಲ್ಲು!

ಮುಖ್ಯ ಪಾತ್ರ: ಅವರು ಆರ್‌ಎಸ್‌ಎಸ್ ವಿರುದ್ಧ ನಿಂತು ಹೋರಾಡಿದ್ದಾರೆ. ಅವರ ವಿರುದ್ಧ ಮಾತನಾಡಿದ್ದಾರೆ. ಕೊನೆಗೆ ಆಕೆಯನ್ನು ಆರ್‌ಎಸ್‌ಎಸ್‌ ಕೊಂದಿತು. ಅವಳನ್ನು ಹಿಡಿದು ಕಟ್ಟಿ ಹಾಕಿ.

ಏಕೆ? ಈ ಬಡ ಪತ್ರಕರ್ತನನ್ನು ಏಕೆ ಕೊಂದಿದ್ದೀರಿ?

ದಾಳಿಕೋರ: ನಾವು, ಆರ್‌ಎಸ್‌ಎಸ್, ದೇಶಭಕ್ತರು.

ಮುಖ್ಯ ಪಾತ್ರ: ನೀವು ಅವರನ್ನು ಕೇಳಿದ್ದೀರಾ? ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದು, ಮಹಾತ್ಮ ಗಾಂಧೀಜಿಗೆ ಗುಂಡು ಹಾರಿಸಿದವರು ಯಾರು. ಅವರು ಆರ್.ಎಸ್.ಎಸ್ ನವರು.ವರು ಅಪಾಯಕಾರಿಗಳು. ಕೋಮುವಾದ ನಿಮ್ಮ ಅಡಿಗೆ ಪ್ರವೇಶಿಸಿದ ನಂತರವೂ ನಿಮ್ಮ ಈ ಮೌನ ಅಪಾಯಕಾರಿ.

ಪ್ರೇಕ್ಷಕರು: ಹೌದು, ಮೌನ ಅಪಾಯಕಾರಿ.

ಪ್ರಮುಖ ಪಾತ್ರ: ಗುಜರಾತ್‌ನ ಮಣ್ಣಿನಿಂದ ಸುಮಾರು 2000 ಅಲ್ಪಸಂಖ್ಯಾತ ಸಮುದಾಯಗಳನ್ನು ನಿರ್ನಾಮ ಮಾಡಿದ ಆರ್‌ಎಸ್‌ಎಸ್. ಕಲ್ಬುರ್ಗಿ, ಗೋವಿಂದ ಪನ್ಸಾರೆ ಅವರನ್ನು ಕೊಂದ ಆರ್.ಎಸ್.ಎಸ್. ಬರೆಯುವ ಮತ್ತು ಮಾತನಾಡುವವರನ್ನು ನಾಶಪಡಿಸುವ ಆರ್.ಎಸ್.ಎಸ್. ಅವರು ಒಂದು ಅಪಾಯ.

ಎಂಬ ಮಾತುಗಳು ಈ ವೈರಲ್ ವೀಡಿಯೋದಲ್ಲಿ ಕಂಡು ಬರುತ್ತದೆ. ವೀಡಿಯೋದಲ್ಲಿ ಇರುವ ಸಂಭಾಷಣೆಯೂ, ನೀಡಲಾಗಿರುವ ಹಿಂದಿ ಶಿರ್ಷಿಕೆಯೂ ಒಂದಕ್ಕೊಂದು ತದ್ವಿರುದ್ಧವಾಗಿದೆ.

ಫ್ಯಾಕ್ಟ್‌ಚೆಕ್: CPIM ಸೈಬರ್ ಕಮ್ಯೂನ್ ಹೆಸರಿನ ಫೇಸ್‌ಬುಕ್ ಪುಟದಲ್ಲಿ ಸೆಪ್ಟೆಂಬರ್ 9, 2017 ರಂದು ಅಪ್‌ಲೋಡ್ ಮಾಡಲಾದ ಅದೇ ವೀಡಿಯೊವನ್ನು ನಾವು ಗೂಗಲ್ ರಿವರ್ಸ್‌ ಇಮೇಜ್ ಮೂಲಕ ಕಂಡುಕೊಂಡಿದ್ದೇವೆ.

ವೀಡಿಯೊವನ್ನು ಮಲಯಾಳಂ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ, ಇದು “ಆರ್‌ಎಸ್‌ಎಸ್‌ನಿಂದ ಗುಂಡಿಕ್ಕಲ್ಪಟ್ಟ ಗೌರಿ ಲಂಕೇಶ್ ಹತ್ಯೆಯನ್ನು ಆಧರಿಸಿ ಆರ್‌ಎಸ್‌ಎಸ್ ಅನ್ನು ಖಂಡಿಸುವ ಬೀದಿ ನಾಟಕ” ಎಂದು ಅನುವಾದಿಸುತ್ತದೆ. (ಮೂಲ ಶೀರ್ಷಿಕೆ:RSS വെടിവെച്ച് കൊന്ന ഗൗരി ലങ്കേഷിന്‍റെ കൊലപാതകത്തെ ആസ്പദമാക്കി ആര്‍എസ്എസ്സിനെ ജനകീയ വിജാരണ ചെയ്യുന്ന തെരുവ് നാടകം.)

ಇದೇ ಶೀರ್ಷಿಕೆಯೊಂದಿಗೆ ಫೇಸ್‌ಬುಕ್‌ನಲ್ಲಿ ವಿಡಿಯೋ ವೈರಲ್ ಆಗಿದೆ. ಈ ನಿಟ್ಟಿನಲ್ಲಿ ನಾವು ಮಾಧ್ಯಮ ವರದಿಗಳನ್ನು ಹುಡುಕಿದಾಗ ಸೆಪ್ಟೆಂಬರ್ 13, 2017 ರಂದು ದಿ ನ್ಯೂಸ್ ಮಿನಿಟ್‌ನ ವರದಿಯೊಂದು ಲಭ್ಯವಾಗಿದೆ, ವರದಿಯಲ್ಲಿ ವೈರಲ್ ವೀಡಿಯೊ ಸೆಪ್ಟೆಂಬರ್ 5 ರಂದು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಆಧರಿಸಿದ ಬೀದಿ ನಾಟಕದ ಸಂದರ್ಭದ್ದು ಎಂದಿದೆ, ಇದರಲ್ಲಿ ಕೊಲೆಗೆ ಜವಾಬ್ದಾರಿಯನ್ನು ಆರ್‌ಎಸ್‌ಎಸ್ ಎಂದು ಹೇಳಲಾಗಿದೆ.

ವರದಿಗಳ ಪ್ರಕಾರ, ಮಲಪ್ಪುರಂ ಜಿಲ್ಲೆಯ ಕಾಳಿಕಾವುನಲ್ಲಿ ಈ ಬೀದಿ ನಾಟಕವನ್ನು ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಪ್ರದರ್ಶಿಸಿದೆ.

ಮತ್ತೊಂದೆಡೆ, 13 ಸೆಪ್ಟೆಂಬರ್, 2017 ರಂದು ಪ್ರಕಟವಾದ ನ್ಯೂಸ್ 18 ವರದಿಯು ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾವನ್ನು ಉಲ್ಲೇಖಿಸಿ, ಈ ವೀಡಿಯೊ ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿ ಆಯೋಜಿಸಲಾದ ಬೀದಿ ನಾಟಕದ ಭಾಗವಾಗಿದೆ ಎಂದು ಹೇಳಿದೆ.

ಆದ್ದರಿಂದ ಕೇರಳದಲ್ಲಿ ಆರ್‌ಎಸ್‌ಎಸ್ ಬೆಂಬಲಿಗ ಮಹಿಳೆಯನ್ನು ಎಡಪಂಥೀಯರು, ಮುಸ್ಲಿಮರು ಕೊಂದಿಲ್ಲ. ಇದೊಂದು ದ್ವೇಷಪೂರಿತ ಆಪಾದನೆ. ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ನಡೆಸಿದ ಬೀದಿ ನಾಟಕವನ್ನು RSS  ಬೆಂಬಲಿಗ ಮಹಿಳೆಯನ್ನು ಕೇರಳದಲ್ಲಿ ಮುಸ್ಲಿಮರು ಹತ್ಯೆ ಮಾಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿ: ಕೇರಳದ ಚರ್ಚ್ ಒಂದರಲ್ಲಿ ₹7,000 ಕೋಟಿ ಮೌಲ್ಯದ ಕಪ್ಪುಹಣ ಪತ್ತೆಯಾಗಿದೆ ಎಂಬುದು ಸುಳ್ಳು


ವೀಡಿಯೋ ನೋಡಿ: 10 ಕೋಟಿ ಕುಟುಂಬಗಳಿಗೆ PM ಉಜ್ವಲ ಗ್ಯಾಸ್ ನೀಡಿದ್ದರಿಂದ 1.5 ಲಕ್ಷ ಜನರ ಜೀವ ಉಳಿಸಿದೆ ಎಂಬುದು ನಿಜವಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *