Fact Check | ಇರಾನಿನ ಮುಸ್ಲಿಂ ವ್ಯಕ್ತಿ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ್ದಾನೆ ಎಂದು ವೆಬ್ ಸಿರೀಸ್ ವಿಡಿಯೋ ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ” “ಮುಹಮ್ಮದ್ ಮೊಯಿನ್ ಅಲ್-ದಿನ್, 86 ವರ್ಷ. ಗದ್ದೆಯೊಂದರಲ್ಲಿ 7 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇದು ಇಸ್ಲಾಮಿಕ್ ಸಂಸ್ಕೃತಿ, ಮತ್ತು ಇಸ್ಲಾಂನ ಪ್ರವಾದಿ ಮುಹಮ್ಮದ್ ಅವರು 6 ವರ್ಷದವಳಾದ ಆಯಿಷಾಳನ್ನು ವಿವಾಹವಾಗಿದ್ದರು. ಈ ಸಂಸ್ಕೃತಿಯನ್ನು ನಂಬುವ ಜನರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅವರು ಇಂದು ಲಕ್ಷಾಂತರ ಸಂಖ್ಯೆಯಲ್ಲಿ ಪಶ್ಚಿಮದಲ್ಲಿ ವಾಸಿಸುತ್ತಿದ್ದಾರೆ.” ಎಂದು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷವನ್ನು ಹರಡಿಸುತ್ತಾ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ವಿಡಿಯೋ ನೋಡಿದ ಹಲವರು ಇದು ನಿಜವಾದ ಘಟನೆ ಎಂದು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುವುದರ ಜೊತೆಗೆ ಮುಸ್ಲಿಂ ಸಮುದಾಯದ ವಿರುದ್ಧವು ಹಲವು ರೀತಿಯಾದ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ವಿಡಿಯೋವನ್ನು ಗಮನಿಸಿದಾಗ ಇದು ಹಲವು ಅನುಮಾನಗಳನ್ನು ಹುಟ್ಟಿಸುತ್ತಿದೆ. ಹಾಗಾಗಿ ಈ ವೈರಲ್‌ ವಿಡಿಯೋದ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ @xavierjp__ ಎಂಬ ಎಕ್ಸ್‌ ಖಾತೆಯ ಬಳಕೆದಾರರು ವೈರಲ್‌ ಪೋಸ್ಟ್‌ವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಅದರಲ್ಲಿ ಅವರು ಈ ಕ್ಲಿಪ್ 2004 ರ “ಝಹ್ರಾಸ್ ಐಸ್” ಎಂಬ ಚಲನಚಿತ್ರದಿಂದ ತೆಗೆದುಕೊಳ್ಳಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಬಳಿಕ ಈ ಕುರಿತು ಇನ್ನಷ್ಟು ಕೀ ವರ್ಡ್ಸ್‌ಗಳನ್ನು ಬಳಸಿ ಹುಡುಕಿದಾಗ, ಇದು 2004 ರಲ್ಲಿ ಪ್ರಾರಂಭವಾದ ಇರಾನಿನ ಟಿವಿ ಸರಣಿಯಾಗಿದೆ. ಈ ಸರಣಿಯನ್ನು ಮೂಲತಃ ಪರ್ಷಿಯನ್ ಭಾಷೆಯಲ್ಲಿ ಚಿತ್ರೀಕರಿಸಲಾಯಿತು ನಂತರ ಅರೇಬಿಕ್ ಭಾಷೆಗೆ ಡಬ್ ಮಾಡಲಾಯಿತು ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಈ ಸರಣಿಯ ಕರಿತು ಹೆಚ್ಚಿನ ಮಾಹಿತಿಗಾಗಿ ಪರಿಶೀಲನೆ ನಡೆಸಿದಾಗ 26 ಜನವರಿ 2024ರಂದು “ನೆಟ್‌ವರ್ಕ್ ಮೂವಿ” ಹೆಸರಿನ YouTube ಚಾನಲ್‌ನಲ್ಲಿ ಈ ವೈರಲ್‌ ಕ್ಲಿಪ್‌ನ ಪೂರ್ಣ ಆವೃತ್ತಿಯ ಸಿನಿಮಾವನ್ನೇ ಅಪ್‌ಲೋಡ್‌ ಮಾಡಲಾಗಿದ್ದು 2-ಗಂಟೆ-32-ನಿಮಿಷಗಳ ಅವಧಿಯಲ್ಲಿ ಈ ವೈರಲ್‌ ಕ್ಲಿಪ್‌ನಲ್ಲಿ ಬರುವ ದೃಶ್ಯವಿದೆ. ಆದರೆ ವೈರಲ್‌ ಪೋಸ್ಟ್‌ನಲ್ಲಿ ಹೇಳಿದಂತೆ ಇದು ಅತ್ಯಾಚಾರದ ದೃಶ್ಯವಲ್ಲ. ಬದಲಿಗೆ ಈ ಸಿನಿಮಾದ ಕತೆಯ ಪ್ರಕಾರ ಇಸ್ರೇಲ್‌ ಸೇನೆಯಿಂದ ತಪ್ಪಿಸಿಕೊಳ್ಳಲು ವಯೋವೃದ್ಧನೊಬ್ಬ ತನ್ನ ಕಣ್ಣು ಕಾಣದ ಮೊಮ್ಮಗಳನ್ನು ಮತ್ತು ತನ್ನನ್ನು ರಕ್ಷಿಸಿಕೊಳ್ಳಲು ಅಡಗಿ ಕುಳಿತುಕೊಳ್ಳುವ ದೃಶ್ಯವಾಗಿದೆ. ಹಾಗಾಗಿ ವೈರಲ್‌ ವಿಡಿಯೋ ತಪ್ಪು ದಾರಿಗೆಳೆಯುವಂತೆ ಚಿತ್ರಿಸಲಾಗಿದೆ ಎಂಬುದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ವೈರಲ್‌ ವಿಡಿಯೋದಲ್ಲಿ ಹೇಳಿದಂತೆ ಇರಾನ್‌ನಲ್ಲಿ ಮುಸ್ಲಿಂ ವ್ಯಕ್ತಿ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿದ್ದಾನೆ ಎಂಬುದು ಸುಳ್ಳು ಹಾಗು ಇದನ್ನು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷವನ್ನು ಹರಡಲು ಸಿನಿಮಾ ದೃಶ್ಯವನ್ನು ಬಳಸಿಕೊಂಡು ಈ ಸುಳ್ಳು ಸುದ್ದಿಯನ್ನು ಹರಡಲಾಗಿದೆ ಎಂಬುದು ಸಾಬೀತಾಗಿದೆ.


ಇದನ್ನೂ ಓದಿ : ಮುಸ್ಲಿಂ ವ್ಯಕ್ತಿಯೊಬ್ಬ ಕೆಟ್ಟ ಪಾನಿಪುರಿ ಮಾಡುತ್ತಿದ್ದಾನೆ ಎಂಬುದು ನಾಟಕೀಯ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *