Fact Check | ಈದ್‌ ದಿನ ಪ್ರಾಣಿ ಬಲಿ – ಬಾಂಗ್ಲಾದೇಶದ ವಿಡಿಯೋವನ್ನು ಪ.ಬಂಗಾಳದ್ದು ಎಂದು ಹಂಚಿಕೆ

” ಈ ವಿಡಿಯೋವನ್ನು ನೋಡಿ ಇವು ನಿಮಗೆ ಹಾಲಿವುಡ್ ಸಿನಿಮಾದ ಭಯಾನಕ ದೃಶ್ಯಗಳು ಎಂದೆನಿಸಬಹುದು. ಆದರೆ ನಿಮ್ಮ ಊಹೆ ತಪ್ಪಾಗಿದೆ. ಇದು ಯಾವುದೋ ಒಂದು ಸಿನಿಮಾದ ದೃಶ್ಯವಲ್ಲ ವಾಸ್ತವದಲ್ಲಿ, ಇದು ಪಶ್ಚಿಮ ಬಂಗಾಳದ ಬೀದಿಗಳಲ್ಲಿ ಮುಗ್ಧ ಜೀವಿಗಳ ಹತ್ಯೆಯಿಂದ ಆದ ರಕ್ತಪಾತ. ಅಮಾಯಕ ಗೋವುಗಳ ಸಮೂಹಿಕ ಹತ್ಯೆ. ಒಂದು ಸಮುದಾಯದ ಹಬ್ಬದ ಸಂಭ್ರಮಕ್ಕೆ ಬಹುಸಂಖ್ಯಾತರ ಭಾವನಗೆ ಧಕ್ಕೆ ತಂದ ಟಿಎಂಸಿ. ಇದೆಲ್ಲ ಮಮತಾ ಜಿ- ಹದನ್ ಅವರ ಮತ ಬ್ಯಾಂಕ್ ರಾಜಕಾರಣವಲ್ಲವೆ” ಎಂಬ ಪೋಸ್ಟ್ ಒಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವಿಡಿಯೋದಲ್ಲಿ ಕೂಡ ಪ್ರಾಣಿ ಬಲಿ ನೀಡಿರುವುದನ್ನು ನೋಡಬಹುದಾಗಿದೆ. ಇದರಲ್ಲಿ ನೀರಿನೊಂದಿಗೆ ರಕ್ತ ಬೆರೆತಿರುವುದು ಮತ್ತು ಜಾನುವಾರುಗಳು ಸತ್ತು ಬಿದ್ದಿರುವುದು ಕೂಡ ವಿಡಿಯೋದಲ್ಲಿ ಕಂಡು ಬಂದಿದೆ. ಹೀಗಾಗಿ ಈ ವಿಡಿಯೊದೊಂದಿಗೆ ಹಂಚಿಕೊಳ್ಳಲಾದ ಬರಹಗಳು ನಿಜವಿರಬಹುದು ಎಂದು ಸಾಕಷ್ಟು ಮಂದಿ ಪಶ್ಚಿಮ ಬಂಗಾಳ ಹಾಗೂ ಅಲ್ಲಿನ ಮಮತಾ ಬ್ಯಾನರ್ಜಿ ಸರ್ಕಾರವನ್ನು ವ್ಯಾಪಕವಾಗಿ ಟೀಕಿಸಲಾಗುತ್ತಿದೆ. ಹಾಗಿದ್ದರೆ ಈ ಘಟನೆ ನಿಜಕ್ಕೂ ಪಶ್ಚಿಮ ಬಂಗಾಳದಲ್ಲೇ ನಡೆದಿದೆಯೇ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು ಇದಕ್ಕಾಗಿ ವೈರಲ್‌ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ ಈ ವೈರಲ್‌ ವಿಡಿಯೋನ್ನು 2 ಜುಲೈ 2023 ರಿಂದಲೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ ಎಂಬುದು ಬಯಲಾಗಿದೆ. ಅಲ್ಲಿಗೆ ಈ ವಿಡಿಯೋಗು ಇತ್ತೀಚೆಗೆ ನಡೆದ ಈದ್‌ ಸಂಭ್ರಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ತಿಳಿದು ಬಂದಿದೆ.

ಇನ್ನು ಈ ವಿಡಿಯೋ ಯಾವ ಪ್ರದೇಶದ್ದೂ ಎಂದು ಖಚಿತ ಪಡಿಸಿಕೊಳ್ಳಲು ಇನ್ನಷ್ಟು ಹುಡುಕಾಟ ನಡೆಸಿದಾಗ, ಇದೇ ವೈರಲ್‌ ವಿಡಿಯೋವನ್ನು ಅಶ್ವಿನ್‌ ಶ್ರೀವತ್ಸವ ಎಂಬುವವರು ತಮ್ಮ ಎಕ್ಸ್‌ ಖಾತೆಯಲ್ಲಿ ” ಹಿಂದುಗಳು ಭಾರತದಲ್ಲಿ ಹೋಳಿಯನ್ನು ಬಣ್ಣಗಳೊಂದಿಗೆ ಆಚರಿಸುತ್ತಾರೆ, ಆದರೆ ಬಾಂಗ್ಲಾದೇಶದ ಢಾಕದಲ್ಲಿ ಪ್ರಾಣಿವಧೆಯ ಮೂಲಕ 2023ರ ಬಕ್ರಿದ್‌ ಆಚರಿಸಲಾಗುತ್ತಿದೆ” ಎಂದು ಹಂಚಿಕೊಂಡಿದ್ದಾರೆ. ಹೀಗಾಗಿ ಈ ವೈರಲ್‌ ವಿಡಿಯೋ ಬಾಂಗ್ಲಾದೇಶದ್ದು ಎಂಬುದು ತಿಳಿದು ಬಂದಿದೆ.

ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ವೈರಲ್‌ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಈ ವೈರಲ್‌ ವಿಡಿಯೋದಲ್ಲಿನ ಕಟ್ಟಡ ಜನ ವಸತಿ ಪ್ರದೇಶ ಎಂಬುದು ಖಚಿತವಾಗಿದೆ. ಹೀಗಾಗಿ ಈ ಕಟ್ಟಡಗಳ ಆಧಾರದ ಮೇಲೆ ಹುಡುಕಾಟ ನಡೆಸಿದಾಗ ಇವು ಬಾಂಗ್ಲಾದೇಶದ ಢಾಕದಲ್ಲಿನ ಶಾಪ್ನೋನಗರ ಅಥವಾ ಸ್ವಪ್ನಾನಗರ ವಸತಿ ಫ್ಲಾಟ್ ಪ್ರಾಜೆಕ್ಟ್ ಕಟ್ಟಡಗಳು ಎಂದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವಂತೆ ಸಾಮೂಹಿಕವಾಗಿ ಗೋವುಗಳ ವಧೆ ಮಾಡಿರುವ ವಿಡಿಯೋ ಪಶ್ಚಿಮ ಬಂಗಾಳದ್ದು ಎಂಬುದು ಸುಳ್ಳು ಮತ್ತು ಈ ವಿಡಿಯೋ ಬಾಂಗ್ಲಾದೇಶದಲ್ಲಿ 2023ರ ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಚಿತ್ರೀಸಲಾಗಿದೆ ಎಂಬುದು ಸಾಭೀತಾಗಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ನಂಬುವ ಮೊದಲು ಒಮ್ಮೆ ಪರಿಶೀಲಿಸಿ.


ಇದನ್ನೂ ಓದಿ : ಇನ್ನೊಬ್ಬರ ಪೂಜಾ ಸ್ಥಳದಲ್ಲಿ ಕುಣಿಯದೇ ಈದ್ ಆಚರಿಸಿದ ಮುಸ್ಲಿಮರು ಅದ್ಭುತ ಸಮುದಾಯ ಎಂದು ಧ್ರುವ್ ರಾಠೀ ಹೇಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *