Fact Check: ಟಿಎಂಸಿ ಬೆಂಬಲಿಗರು ಹಿಂದು ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ ಎಂದು ಬಾಂಗ್ಲಾದೇಶದ ವೀಡಿಯೋ ಹಂಚಿಕೆ

ಟಿಎಂಸಿ

ಪಶ್ಚಿಮ ಬಂಗಾಳದಲ್ಲಿ, ತೃಣಮೂಲ್ ಕಾಂಗ್ರೆಸ್‌(ಟಿಎಂಸಿ) ಬೆಂಬಲಿಗರು ಮತ್ತು ಇಸ್ಲಾಮಿಸ್ಟ್ ಗುಂಪೊಂದು ಹಿಂದೂ ಕುಟುಂಬದ ಕಾರಿಗೆ ಅಡ್ಡಗಟ್ಟಿ, ಪತಿ, ಹೆಂಡತಿ ಮತ್ತು ಮಗುವಿಗೆ ಕಿರುಕುಳ ನೀಡಿದ್ದಾರೆ. ಎಂಬ ವಿಡಿಯೋ ಒಂದು ಸಾಮಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ.  ವೈರಲ್ ವೀಡಿಯೋದಲ್ಲಿ ಗುಂಪೊಂದು ಕಾರಿನಲ್ಲಿ ಕುಳಿತಿರುವ ವ್ಯಕ್ತಿಯನ್ನು ಹೊರಗೆ ಬರುವಂತೆ ಒತ್ತಾಯಪಡಿಸುತ್ತಿದ್ದರೆ, ಬುರ್ಖಾದಾರಿ ಮಹಿಳೆಯೊಬ್ಬರು ಗುಂಪಿನ ಜನರಿಗೆ ಏನು ಮಾಡದಂತೆ ಕೇಳಿಕೊಳ್ಳುತ್ತಿದ್ದಾರೆ. ಕಾರಿನಲ್ಲಿ ಕುಳಿತ ವ್ಯಕ್ತಿ ಮತ್ತು ಮಗು ಭಯ ಮತ್ತು ಗಾಭರಿಗೊಂಡು ಅಳುವುದನ್ನು ನೋಡಬಹುದು.

ಅನೇಕ ಬಲಪಂಥೀಯರು ಮತ್ತು ಬಿಜೆಪಿ ಬೆಂಬಲಿಗರು ಈ ವೀಡಿಯೋವನ್ನು ಹಂಚಿಕೊಂಡು ಮುಸಲ್ಮಾನರು ಹಿಂದು ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ ಎಂದು ಪ್ರತಿಪಾದಿಸುತ್ತಿದ್ದಾರೆ. ಅವುಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್: ಈ ಕುರಿತು ಹುಡುಕಲು ನಾವು ವೈರಲ್ ವೀಡಿಯೊದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ ಬಾಂಗ್ಲಾದೇಶದ ಸುದ್ದಿ ಮಾಧ್ಯಮ Rtv ನ್ಯೂಸ್‌ನ ಅಧಿಕೃತ YouTube ಚಾನಲ್‌ ನಲ್ಲಿ ಅದೇ ವೀಡಿಯೊವನ್ನು ಫೆಬ್ರವರಿ 7, 2024 ರಂದು ಅಪ್‌ಲೋಡ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬಾಂಗ್ಲಾದಲ್ಲಿ, “3 ಜನರು ಮೈಮೆನ್‌ಸಿಂಗ್ ಪಾರ್ಕ್ ದಾಳಿಯ ಘಟನೆಯಲ್ಲಿ ಬಂಧಿಸಲಾಗಿದೆ.” ಎಂದು ಈ ವೀಡಿಯೋವಿಗೆ ಶೀರ್ಷಿಕೆ ನೀಡಲಾಗಿದೆ.

ಷಹಜಹಾನ್ ಎಂಬ ವ್ಯಕ್ತಿ ಮತ್ತು ಅವರ ಕುಟುಂಬ ಬಾಂಗ್ಲಾದೇಶದ ಮೈಮೆನ್‌ಸಿಂಗ್‌ನ ವಲುಕಾದಲ್ಲಿರುವ ಅರಣ್ಯ ಪಾರ್ಕ್‌ಗೆ ಭೇಟಿ ನೀಡಲು ಹೋದರು ಎಂದು ವೀಡಿಯೊ ವರದಿ ಮಾಡಿದೆ, ಅಲ್ಲಿ ಅವರ ಮೇಲೆ ಪಾರ್ಕ್ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಇತರ ಬಾಂಗ್ಲಾದೇಶದ ಸುದ್ದಿವಾಹಿನಿಗಳಾದ ಎಕತ್ತೋರ್ ಟಿವಿ, ಜಾಗೋ ನ್ಯೂಸ್ ಮತ್ತು ಬಾಂಗ್ಲಾರ್ ಸೊಮೊಯ್ ಕೂಡ ಆ ಸಮಯದಲ್ಲಿ ಘಟನೆಯನ್ನು ವರದಿ ಮಾಡಿದ್ದಾರೆ.

ಹೀಗಾಗಿ, ಈ ವೀಡಿಯೊ ಪಶ್ಚಿಮ ಬಂಗಾಳದ್ದಾಗಿರದೆ ಬಾಂಗ್ಲಾದೇಶದ್ದಾಗಿದೆ. ವೀಡಿಯೋದಲ್ಲಿ ಒಳಗೊಂಡಿರುವ ಎಲ್ಲಾ ವ್ಯಕ್ತಿಗಳು, ದೂರುದಾರರು ಮತ್ತು ಆರೋಪಿಗಳು ಒಂದೇ ಸಮುದಾಯದವರು(ಮುಸ್ಲಿಂ) ಎಂದು ವರದಿಯಾಗಿದೆ.


ಇದನ್ನು ಓದಿ: ಬಿಜೆಪಿಯ ಮಿಸ್ಡ್-ಕಾಲ್ ಅಭಿಯಾನವನ್ನು ಯುಸಿಸಿ ಪರವಾಗಿ ಮತ ಚಲಾಯಿಸುವ ಅಭಿಯಾನ ಎಂದು ವೈರಲ್ ಮಾಡಲಾಗಿದೆ


ವೀಡಿಯೋ ನೋಡಿ: ನೆಹರೂರವರು ಬ್ರಿಟೀಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು ಎಂದು ಸುಳ್ಳು ಹೇಳಿದ ಅಜಿತ್ ಹನುಮಕ್ಕನವರ್


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *