ಭಾರತದ ರೋಹಿಂಗ್ಯಾ ಶಿಬಿರಗಳಲ್ಲಿ ಒಂದು ವರ್ಷದಲ್ಲಿ 60,000 ಶಿಶುಗಳು ಜನಿಸಿವೆ ಎಂಬುದು ಸುಳ್ಳು

ರೋಹಿಂಗ್ಯಾ

“ಭಾರತದ ರೋಹಿಂಗ್ಯಾ ಶಿಬಿರದಲ್ಲಿಒಂದು ವರ್ಷಕ್ಕೆ ಸುಮಾರು 60,000 ಶಿಶುಗಳು ಜನಿಸಿವೆ. ಈ ಅಂಕಿ ಅಂಶಗಳನ್ನು ಒಮ್ಮೆ ನೀವೇ ನೋಡಿ. ದೇಶದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಹಲವು ಪೋಸ್ಟ್‌ಗಳು ವೈರಲ್‌ ಆಗುತ್ತಿದೆ. ಅದು ನಿಜವೇ ಎಂಬುದನ್ನು ಪರಿಶೀಲಿಸೋಣ.

 

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಈ ಸುದ್ದಿಯ ಕುರಿತು ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ 28 ಫೆಬ್ರುವರಿ 2018 ರಲ್ಲಿ ಇಂಡಿಯ ಟಿವಿ ವೆಬ್‌ತಾಣದಲ್ಲಿ ಪ್ರಕಟಗೊಂಡ ವರದಿಯೊಂದು ಕಂಡು ಬಂದಿದೆ. ಆ ವರದಿಯ ಪ್ರಕಾರ “ಬಾಂಗ್ಲಾದೇಶದ ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳಲ್ಲಿನ ಶೋಚನೀಯ ಪರಿಸ್ಥಿತಿಗಳನ್ನು ಚರ್ಚಿಸಿದ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಂ ಖೇತ್ರಪಾಲ್ ಅವರು, ಮ್ಯಾನ್ಮಾರ್‌ನಿಂದ ಪಲಾಯನ ಮಾಡಿದ ರೋಹಿಂಗ್ಯಾಗಳ ಪರಿಸ್ಥಿತಿಯನ್ನು ಭಯಾನಕ ಎಂದು ವಿವರಿಸಿದ್ದಾರೆ. ಮುಂದಿನ ವರ್ಷದಲ್ಲಿ ಈ ನಿರಾಶ್ರಿತರ ಶಿಬಿರಗಳಲ್ಲಿ 60,000 ಶಿಶುಗಳು ಜನಿಸುತ್ತವೆ ಎಂದು ಅವರು ಅಂದಾಜಿಸಿದ್ದಾರೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ UNHCR ದಿನಕ್ಕೆ 60 ಮಕ್ಕಳು ಜನಿಸುತ್ತಾರೆ ಎಂದು ತಿಳಿಸಿದೆ. ಅದನ್ನೇ ತಪ್ಪಾಗಿ 60,000 ಎಂದು ವೈರಲ್‌ ಮಾಡಲಾಗಿದೆ. ಒಟ್ಟಾರೆಯಾಗಿ ಈ ವರದಿ ಬಾಂಗ್ಲದೇಶದ ರೋಹಿಂಗ್ಯಾ ನಿರಾಶ್ರಿತರ ಸಂಕಷ್ಟ ಮತ್ತು ಶಿಶುಗಳ ಜನನ ಪ್ರಮಾಣದ ಬಗ್ಗೆ ಉಲ್ಲೇಖಿಸಿದೆಯೇ ಹೊರತು ಭಾರತದ ಬಗ್ಗೆ ಅಲ್ಲ ಎಂಬುದು ತಿಳಿದು ಬಂದಿದೆ.

ಭಾರತದಲ್ಲಿ ರೋಹಿಂಗ್ಯಾಗಳ ಪರಿಸ್ಥಿತಿ ಹೇಗಿದೆ?

UNHCR ಪ್ರಕಾರ, 31 ಜನವರಿ 2022 ರಂತೆ, 46,000 ಕ್ಕೂ ಹೆಚ್ಚು ನಿರಾಶ್ರಿತರು ಮತ್ತು ಮುಖ್ಯವಾಗಿ ಮ್ಯಾನ್ಮಾರ್ ಮತ್ತು ಅಫ್ಘಾನಿಸ್ತಾನದಿಂದ ಆಶ್ರಯ ಹುಡುಕಿಕೊಂಡು ಬಂದವರು UNHCR ಭಾರತದಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ. ಆದಾಗ್ಯೂ, ಭಾರತದಲ್ಲಿನ ರೋಹಿಂಗ್ಯಾ ಶಿಬಿರಗಳಲ್ಲಿ ಎಷ್ಟು ಹೆರಿಗೆಗಳು ನಡೆಯುತ್ತಿವೆ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ದೇಶದಲ್ಲಿ ವಾಸಿಸುತ್ತಿರುವ ರೋಹಿಂಗ್ಯಾಗಳ ಸಂಖ್ಯೆಯ ಬಗ್ಗೆ ನಿಖರವಾದ ಅಂಕಿಅಂಶಗಳಿಲ್ಲ ಎಂದು ಭಾರತ ಸರ್ಕಾರ ಹಲವಾರು ಸಂದರ್ಭಗಳಲ್ಲಿ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ . ಆದಾಗ್ಯೂ, ಮ್ಯಾನ್ಮಾರ್‌ನಿಂದ ಸುಮಾರು 40,000 ರೋಹಿಂಗ್ಯಾಗಳು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ ಎಂದು ಅಂದಾಜಿಸಲಾಗಿದೆ. ರೋಹಿಂಗ್ಯಾ ಶಿಬಿರಗಳಲ್ಲಿ ವರ್ಷಕ್ಕೆ 60,000 ಹೆರಿಗೆಗಳು ನಡೆಯುತ್ತಿವೆ ಎಂಬುದಕ್ಕೆ ಯಾವುದೇ ಪುರಾವೆಗಳು ಅಧಿಕೃತವಾಗಿ ಲಭ್ಯವಿಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತದಲ್ಲಿ ರೋಹಿಂಗ್ಯಾ ಶಿಬಿರಗಳಲ್ಲಿ ವರ್ಷಕ್ಕೆ 60,000 ಜನನಗಳ ಕುರಿತಾದ ಈ ಸುದ್ದಿ ಬಾಂಗ್ಲಾದೇಶಕ್ಕೆ ಸಂಬಂಧಿಸಿದ್ದಾಗಿದ್ದು, ಅದು ಕೂಡ ತಪ್ಪಿನಿಂದ ಕೂಡಿದೆ. ಅದಕ್ಕೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ.


ಇದನ್ನೂ ಓದಿ : Fact Check | ದೇವಸ್ಥಾನದಲ್ಲಿ ಮಹಿಳೆ ಸಿಗರೇಟ್ ಸೇದುವಾಗ ಬಿದ್ದಿದ್ದಾರೆ ಎಂಬುದು ನಾಟಕೀಯ ವಿಡಿಯೋ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *