Fact Check | ಪ್ರಧಾನಿ ಮೋದಿ ಕ್ಯಾಬಿನೆಟ್ ಸಚಿವರ ಶೈಕ್ಷಣಿಕ ಅರ್ಹತೆ ಎಂದು ಹಳೆಯ ಗ್ರಾಫಿಕ್ಸ್‌ ಹಂಚಿಕೆ!

ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟದಲ್ಲಿನ ಮಂತ್ರಿಗಳ ಶೈಕ್ಷಣಿಕ ಅರ್ಹತೆಯ ಕುರಿತು ಗ್ರಾಫಿಕ್‌ ಚಿತ್ರವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಅದರಲ್ಲಿ ” ಪ್ರಧಾನಿ ಮೊದಿ ಅವರ ಮಂತ್ರಿ ಮಂಡಲದಲ್ಲಿ 7 ಜನ ಪಿಎಚ್‌ಡಿ , 3 ಎಂಬಿಎ ಪದವಿ ಸುಮಾರು 68 ಪದವೀಧರರು,, 13 ಮಂದಿ ವಕೀಲರು, 6 ಮಂದಿ ವೈದ್ಯರು, 7 ಮಂದಿ ನಾಗರಿಕ ಸೇವಾ ಅಧಿಕಾರಿಗಳಾಗಿದ್ದವರು ಮತ್ತು 5  ಎಂಜಿನಿಯರ್‌ ಪದವಿಗಳನ್ನು ಪಡೆದವರು ಇದ್ದಾರೆ. ಇದು ಇತ್ತೀಚೆಗೆ ಮೋದಿ ಸರ್ಕಾರದ ಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದವರ ವಿದ್ಯಾರ್ಹತೆ.” ಎಂಬ ಅಂಶವನ್ನು ಸೂಚಿಸುವ ಗ್ರಾಫಿಕ್‌ ಚಿತ್ರ ವೈರಲ್‌ ಆಗಿದೆ.

ಈ ಗ್ರಾಫಿಕ್‌ ಚಿತ್ರವನ್ನು ನೋಡಿದ ಹಲವು ಮಂದಿ ಇದು ನಿಜವಾದ ಮಾಹಿತಿ ಎಂದು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಇದು ಹಲವು ಅನುಮಾನಗಳಿಗೆ ಕೂಡ ಕಾರಣವಾಗಿದೆ. ಹಾಗಿದ್ದರೆ ವೈರಲ್‌ ಗ್ರಾಫಿಕ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಮಾಹಿತಿ ನಿಜವೆ? ಆ ಕುರಿತು ಈ ಅಂಕಣದಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಈ ವೈರಲ್‌ ಗ್ರಾಫಿಕ್‌ ಚಿತ್ರದ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವೈರಲ್‌ ಚಿತ್ರವನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿತು. ಈ ವೇಳೆ 07 ಜುಲೈ 2021ರಲ್ಲಿ ನ್ಯೂಸ್‌ 18 ನಲ್ಲಿ “PM Modi’s New Team: Younger and Inclusive Cabinet Explained in GFX” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿಯೊಂದು ಕಂಡು ಬಂದಿದೆ. ಇದರಲ್ಲಿ ವೈರಲ್‌ ಗ್ರಾಫಿಕ್‌ ಕೂಡ ಕಂಡು ಬಂದಿದೆ. ಇನ್ನು ಇದೇ ವರದಿಯಲ್ಲಿ ಕ್ಯಾಬಿನೆಟ್ ಸಚಿವಾಲಯದ ಬಗ್ಗೆ ವಿವರಗಳನ್ನು ಉಲ್ಲೇಖಿಸಿದೆ ಮತ್ತು ಇದರಲ್ಲಿ ಸಚಿವರ ಜಾತಿಗಳು, ಶಿಕ್ಷಣ ಮತ್ತು ಅನುಭವಗಳ ಕುರಿತು ಮಾಹಿತಿ ಕೂಡ ಇದೆ. 

ಹೆಚ್ಚಿನ ಮಾಹಿತಿಗಾಗಿ ಪರಿಶೀಲನೆ ನಡೆಸಿದಾಗ ಜುಲೈ 2021 ರಲ್ಲಿ ಮೋದಿ ಸಚಿವ ಸಂಪುಟದ ಪುನರ್‌ ವಿಂಡನೆಯ ನಂತರ ಹಲವಾರು ಬದಲಾವಣೆಗಳನ್ನು ಮಾಡಲಾಯಿತು. ಸಚಿವ ಸಂಪುಟದಲ್ಲಿ ಅಶ್ವಿನಿ ವೈಷ್ಣವ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಅವರಂತಹ ನಾಯಕರಿಗೆ ಹೊಸ ಖಾತೆಗಳ ಉಸ್ತುವಾರಿ ನೀಡಲಾಯಿತು. ಈ ವೇಳೆ ಮಂತ್ರಿ ಮಂಡಲದಲ್ಲಿ ಆದ ಬದಲಾವಣೆಯನ್ನು 2021ರ ಈ ಗ್ರಾಫಿಕ್‌ ಚಿತ್ರದಲ್ಲಿ ಹಂಚಿಕೊಳ್ಳಲಾಗಿದೆ.

ಇನ್ನು ಈಗಿನ ಮಂತ್ರಿ ಮಂಡಲದ ಶೈಕ್ಷಣಿಕ ಅರ್ಹತೆಯ ಕುರಿತು ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಇತ್ತೀಚೆಗೆ ವರದಿಯೊಂದನ್ನು ಪ್ರಕಟ ಮಾಡಿತ್ತು. ಅದರ ಪ್ರಕಾರ, ಹೊಸ ಮಂತ್ರಿ ಮಂಡಲದಲ್ಲಿ 14 ಪದವೀಧರರು, 10 ಪದವೀಧರ ವೃತ್ತಿಪರರು, 26 ಸ್ನಾತಕೋತ್ತರ ಪದವೀಧರರು ಮತ್ತು ಅವರಲ್ಲಿ 7 ಮಂದಿ ಡಾಕ್ಟರೇಟ್ ಪದವಿ ಹೊಂದಿದ್ದಾರೆ ಎಂಬುದು ತಿಳಿದು ಬಂದಿದೆ. 

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಮೋದಿ ಅವರ ಮೂರನೆ ಅಧಿಕಾರವಧಿಯಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವವರ‌ ಶೈಕ್ಷಣಿಕ ಅರ್ಹತೆಯ ಕುರಿತು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಗ್ರಾಫಿಕ್‌ ಚಿತ್ರ 2021ರದ್ದಾಗಿದ್ದು, ಇದನ್ನೇ ನಿಜವೆಂದು ಸುಳ್ಳು ಮಾಹಿತಿಯನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ ಎಂಬುದು ಸಾಭೀತಾಗಿದೆ.


ಇದನ್ನೂ ಓದಿ : ಬಿಜೆಪಿ ಮತ್ತು RSS ನಾಯಕರ ಮಕ್ಕಳು ಮುಸ್ಲೀಮರನ್ನು ಮದುವೆಯಾಗಿದ್ದಾರೆ ಎಂದು ಹಂಚಿಕೊಂಡಿರುವ ಮಾಹಿತಿ ನಿಖರವಾಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *