Fact Check | ರಿಯಾಸಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಕುರಿತು ಸಂಬಂಧವಿಲ್ಲದ ಫೋಟೋಗಳ ಹಂಚಿಕೆ

“ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಭಾರತೀಯ ಸೇನೆಯ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ದಾಳಿ ಮಾಡಲಾಗಿದ್ದು, ಹತ್ತು ಸೈನಿಕರು ಸಾವನ್ನಪ್ಪಿದ್ದಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವು ಫೋಟೋಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋಗಳನ್ನು ನೋಡಿದ ಹಲವರು ರಿಯಾಸಿಲ್ಲಿ ನಡೆದ ದಾಳಿಯಲ್ಲಿ ಸೈನಿಕರೂ ಸಾವನ್ನಾಪ್ಪಿದ್ದಾರಾ ಎಂದು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ. ಜೊತೆಗೆ ಇದೇ ಫೋಟೋವನ್ನು ಎಲ್ಲರಿಗೂ ಶೇರ್‌ ಮಾಡಿ ಎಂಬ ಬರಹಗಳು ಕೂಡ ಕಂಡು ಬಂದಿದೆ.

ಈ ಬರಹಗಳು ಮತ್ತು ಪೋಸ್ಟ್‌ಗಳನ್ನು ನೋಡಿದ ಹಲವರು ಈ ಕುರಿತು ಯಾವುದೇ ಪರಿಶೀಲನೆ ನಡೆಸದೆ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ವೈರಲ್‌ ಪೋಸ್ಟ್‌ಗಳಲ್ಲಿ ಉಲ್ಲೇಖವಾದಂತೆಯೇ ನಡೆದಿದೆಯೇ ಎಂಬುದನ್ನು ನಾವು ಈ ಅಂಕಣದಲ್ಲಿ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ವೈರಲ್ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಚಿತ್ರದ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಪರಿಶೀಲನೆ ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್‌ ಪೋಟೋಗಳನ್ನು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟ ನಡೆಸಲಾಯಿತು. ಈ ವೇಳೆ 14 ಜುಲೈ 2014 ರಂದು ಅದೇ ದೃಶ್ಯಗಳನ್ನು ಹಂಚಿಕೊಳ್ಳುವ ಯುರೋ ನ್ಯೂಸ್‌ನ ವೀಡಿಯೊವೊಂದು ಕಂಡು ಬಂದಿದೆ, ಇದರಲ್ಲಿ ‘ಅಫ್ಘಾನಿಸ್ತಾನ: ಆತ್ಮಹತ್ಯಾ ಬಾಂಬರ್‌ನಿಂದ, ಮಿಲಿಟರಿ ಬಸ್ ಸ್ಫೋಟ ಎಂಟು ಮಂದಿಯನ್ನು ಸಾವು.’ ಎಂಬ ಶೀರ್ಷಿಕೆ ಕಂಡು ಬಂದಿದೆ.

ಇದಲ್ಲದೆ, ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ವಾಯುಪಡೆಯ ಬಸ್‌ನಲ್ಲಿ ನಡೆದ ದಾಳಿಯಲ್ಲಿ “ಆತ್ಮಾಹುತಿ ಬಾಂಬರ್ ದಾಳಿ ಕನಿಷ್ಠ ಎಂಟು ಮಿಲಿಟರಿ ಅಧಿಕಾರಿಗಳನ್ನು ಕೊಂದಿದ್ದಾನೆ.” ಎಂದು ಸೂಚಿಸುವ ವಿವಿಧ ಸುದ್ದಿ ವಾಹಿನಿಗಳ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. “ನಗರದ ಪಶ್ಚಿಮ ಭಾಗದಲ್ಲಿ  ಕಾಬೂಲ್ ವಿಶ್ವವಿದ್ಯಾಲಯದ ಬಳಿ ನಡೆದ ದಾಳಿಯಲ್ಲಿ ನಾಗರಿಕರು ಸೇರಿದಂತೆ ಇನ್ನೂ 13 ಜನರು ಗಾಯಗೊಂಡಿದ್ದಾರೆ.” ಎಂಬ ವರದಿಗಳು ಕಂಡು ಬಂದಿದ್ದು ಇದರಲ್ಲಿ ಕೆಲ ವೈರಲ್ ಚಿತ್ರ ಮತ್ತು ಅಫಘಾನಿಸ್ತಾನದ ಘಟನೆಗೆ ಸಂಬಂಧ ಪಟ್ಟ ಸುದ್ದಿ ವೀಡಿಯೊದ ಸ್ಕ್ರೀನ್‌ಶಾಟ್‌ಗಳೂ ಹೋಲಿಕೆಯಾಗಿದೆ.

ರಿಯಾಸಿಯಲ್ಲಿ ನಡೆದದ್ದು ಏನು?

ರಿಯಾಸಿಯ ರಾನ್ಸೂ ಪ್ರದೇಶದ ಕಾತ್ರಾದಿಂದ ಶಿವಖೋರಿ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಿನ್ನೆ ಉಗ್ರರು ದಾಳಿ ನಡೆಸಿದ್ದರು. ಈ ಭಯೋತ್ಪಾದಕರ ಗುಂಪು ನಡೆಸಿದ ದಾಳಿಯಿಂದಾಗಿ, ಚಾಲಕನ ನಿಯಂತ್ರಣ ತಪ್ಪಿ, ಬಸ್ ಪೌನಿ ರಿಯಾಸಿಯ ಕಾಂಡಾ ಪ್ರದೇಶದ ಬಳಿ ಆಳವಾದ ಕಮರಿಗೆ ಬಿದ್ದಿತು. ಈ ಅಪಘಾತದಲ್ಲಿ ಒಂಭತ್ತು ಸಾವುಗಳು ಮತ್ತು ಹಲವಾರು ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಈ ಕುರಿತು ಬಹುತೇಕ ಎಲ್ಲಾ ರಾಷ್ಟ್ರೀಯ ಮತ್ತು ಸ್ಥಳೀಯ ಮಾಧ್ಯಮಗಳು ವರದಿಯನ್ನು ಕೂಡ ಮಾಡಿವೆ

ಒಟ್ಟಾರೆಯಾಗಿ ಹೇಳುವುದಾದರೆ ವೈರಲ್‌ ಆಗಿರುವ ಫೋಟೋಗೂ ರಿಯಾಸಿಯ ಭಯೋತ್ಪಾದಕರ ದಾಳಿಗು ಯಾವುದೇ ರೀತಿಯಾದ ಸಂಬಂಧವಿಲ್ಲ ಮತ್ತು ರಿಯಾಸಿಯಲ್ಲಿ ಸೇನಾ ವಾಹನದ ಮೇಲೆ ಭಯೋತ್ಪಾದಕರ ದಾಳಿ ನಡೆದಿದೆ ಎಂಬುದು ಕೂಡ ಸಂಪೂರ್ಣವಾಗಿ ಸುಳ್ಳಾಗಿದೆ. ಇಂತ ಸುಳ್ಳು ಸುದ್ದಿಗಳನ್ನು ಶೇರ್‌ ಮಾಡುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನೂ ಓದಿ : Fact Check: ಉತ್ತರ ಪ್ರದೇಶದಲ್ಲಿ ಟೋಲ್‌ ಪ್ಲಾಜಾವನ್ನು ಬುಲ್ಡೋಜರ್‌ನಿಂದ ಒಡೆದು ಹಾಕಿರುವ ವ್ಯಕ್ತಿ ಹಿಂದುವೇ ಹೊರತು ಮುಸ್ಲಿಂ ಅಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *